Friday, August 26, 2022

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಭದ್ರಾವತಿ ದೊಡ್ಡಗೊಪ್ಪೇನಹಳ್ಳಿ (ಡಿಜಿ ಹಳ್ಳಿ) ವೈಷ್ಣವಿ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ ಗ್ರಾಮದ ಮುಖಂಡರಾದ ನಂಜುಂಡಪ್ಪ ಉದ್ಘಾಟಿಸಿದರು.
    ಭದ್ರಾವತಿ, ಆ. ೨೬ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ದೊಡ್ಡಗೊಪ್ಪೇನಹಳ್ಳಿ (ಡಿಜಿ ಹಳ್ಳಿ) ವೈಷ್ಣವಿ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮ ನಡೆಯಿತು.
    ಕಾರ್ಯಕ್ರಮವನ್ನು ಗ್ರಾಮದ ಮುಖಂಡರಾದ ನಂಜುಂಡಪ್ಪ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಹಳೇನಗರದ ಉದ್ಗೀಥ ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸಾಲಯದ ವೈದ್ಯ ಡಾ. ಸುದರ್ಶನ್ ಆಚಾರ್, ಸಿರಿಧಾನ್ಯಗಳ ಪರಿಚಯ ತಿಳಿಸಿ, ಸಿರಿಧಾನ್ಯಗಳಿಂದ ಮಾಡಬಹುದಾದ ವಿವಿಧ ಖಾದ್ಯಗಳು, ಆರೋಗ್ಯ ಕಾಪಾಡಿಕೊಳ್ಳಲು ಸಿರಿಧಾನ್ಯ ಬಳಕೆಯ ವಿಧಾನಗಳು ಹಾಗು ಸಿರಿಧಾನ್ಯ ಬಳಕೆಯಿಂದ ಆರೋಗ್ಯದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಸಿರಿಧಾನ್ಯ ಮೇಲ್ವಿಚಾರಕ ನಾಗರಾಜ್, ಸಿರಿಧಾನ್ಯ, ಪೌಷ್ಠಿಕ ಆಹಾರದ ಅಗತ್ಯತೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಮಿಲೆಟ್ ಕುರಿತು ಮಾಹಿತಿ ನೀಡಿದರು.
    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸ್ವಸಹಾಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಶೀಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

No comments:

Post a Comment