Sunday, October 9, 2022

ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಸಂಭ್ರಮದ ಆಚರಣೆ

ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಿಂದ ಮೆರವಣಿಗೆ ಬೃಹತ್ ಮೆರವಣಿಗೆ ಆರಂಭಗೊಂಡಿತು.
    ಭದ್ರಾವತಿ, ಅ. ೯:  ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯದವರು ಭಾನುವಾರ ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ವಿಜೃಂಭಣೆಯಿಂದ ಆಚರಿಸಿದರು.  
    ಹಬ್ಬದ ಅಂಗವಾಗಿ ನಗರದ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಿಂದ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಆರಂಭಗೊಳ್ಳಬೇಕಿದ್ದ ಮೆರವಣಿಗೆ ಮಧ್ಯಾಹ್ನ ಆರಂಭಗೊಂಡಿತು. ನಗರದ ವಿವಿಧೆಡೆಗಳಿಂದ ಮಕ್ಕಳು, ಯುವಕರು, ವಯೋವೃದ್ಧರು ವಯಸ್ಸಿನ ಬೇಧ-ಭಾವವಿಲ್ಲದೆ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.


ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಲ್ಲಿ ಮುಸ್ಲಿಂ ಸಮುದಾಯದ ಮಕ್ಕಳು, ಯುವಕರು, ವಯೋವೃದ್ಧರು ವಯಸ್ಸಿನ ಬೇಧ-ಭಾವವಿಲ್ಲದೆ ಸಂಭ್ರಮಿಸಿದರು.

    ಮೆರವಣಿಗೆ ಆರಂಭಕ್ಕೂ ಮೊದಲು ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗು ಆಶಾಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ, ಬಡ ಮಹಿಳೆಯರಿಗೆ ಸೀರೆ ವಿತರಣೆ, ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳಿಂದ ರೋಗಿಗಳಿಗೆ, ವಿಕಲಚೇತನರಿಗೆ ಹಾಲು, ಬ್ರೆಡ್, ಹಣ್ಣು ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಿದವು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ತಂಪು ಪಾನೀಯ, ಮಜ್ಜಿಗೆ ವಿತರಣೆ ಸಹ ನಡೆಯಿತು.


ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಬಡ ಮಹಿಳೆಯರಿಗೆ ಸೀರೆ ವಿತರಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ದಯಾಮ ಸೇರಿದಂತೆ, ವಿವಿಧ ರಾಜಕೀಯಗಳ ಪಕ್ಷಗಳ, ಸಂಘಟನೆಗಳ ಪ್ರಮುಖರು, ಗಣ್ಯರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮುಸ್ಲಿಂ ಸಮುದಾಯದವರಿಗೆ ಹಬ್ಬದ ಶುಭ ಕೋರಿದರು.  
    ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದವರೆಗೂ ಸಾಗಿ ನಂತರ ಸೈಯದ್ ಸಾದತ್ ದರ್ಗಾ ಮೈದಾನದಲ್ಲಿ ವಿವಿಧ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ಮೆಕ್ಕಾ, ಮದೀನಾ ಮಾದರಿ ಸ್ತಬ್ಧ ಚಿತ್ರಗಳು ಗಮನ ಸೆಳೆದವು.


ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಸಿ.ಎನ್ ರಸ್ತೆ ಅನ್ವರ್ ಕಾಲೋನಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಗುಲಾಬಿ ಹೂ ನೀಡಿ ಅಭಿನಂದಿಸಿದರು.
    ಪೊಲೀಸ್ ಇಲಾಖೆ ವತಿಯಿಂದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ್ ಅಮಟೆ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಉಪವಿಭಾಗದ ಎಲ್ಲಾ ವೃತ್ತ ನಿರೀಕ್ಷಕರು, ವಿವಿಧ ಠಾಣೆಗಳ ಠಾಣಾಧಿಕಾರಿಗಳ ಜೊತೆಗೆ ಹೆಚ್ಚುವರಿಯಾಗಿ ಅಧಿಕಾರಿಗಳು, ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿತ್ತು.

No comments:

Post a Comment