Sunday, November 6, 2022

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವಕನ ಬದುಕಿಗೆ ಬೆಳಕಾದ ಸರ್ಕಾರಿ ವೈದ್ಯರು

ಸರ್ಕಾರಿ ಆಸ್ಪತ್ರೆ, ಸರ್ಕಾರಿ ವೈದ್ಯರು ಎಂದರೆ ಮೂಗು ಮುರಿಯುವ ಮಂದಿಗೆ ತಕ್ಕ ಉತ್ತರ ನೀಡುವ ಪ್ರಕರಣ

ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಭದ್ರಾವತಿ ತಾಲೂಕಿನ ಗೌರಾಪುರ ನಿವಾಸಿ ವಾಸುದೇವ(ಗುರು) ಎಂಬ ಯುವಕನ ಬದುಕಿಗೆ ಸರ್ಕಾರಿ ಆಸ್ಪತ್ರೆ ವೈದ್ಯರು ಬೆಳಕಾದ ಹಿನ್ನಲೆಯಲ್ಲಿ ಕುಟುಂಬಸ್ಥರು ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
    ಭದ್ರಾವತಿ, ಅ. ೬ : ಸರ್ಕಾರಿ ಆಸ್ಪತ್ರೆ, ಸರ್ಕಾರಿ ವೈದ್ಯರು ಎಂದರೆ ಮೂಗು ಮುರಿಯುವ ಬಹಳಷ್ಟು ಮಂದಿಗೆ ಇಲ್ಲೊಂದು ಘಟನೆ ಉತ್ತರ ನೀಡುವಂತಿದೆ. ಸರ್ಕಾರಿ ಆಸ್ಪತ್ರೆ ವೈದ್ಯರ ರೋಗಿಗಳ ಮೇಲಿನ ಕಾಳಜಿ ಹಾಗು ವೈದ್ಯರ ಸಾಮರ್ಥ್ಯ ಬೆರಗುಗೊಳಿಸುತ್ತದೆ.
    ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಹಲವು ತಿಂಗಳು ಚಿಕಿತ್ಸೆ ಪಡೆದು ತಮ್ಮ ಬಳಿ ಇದ್ದ ಹಣ ಸಂಪೂರ್ಣವಾಗಿ ಖಾಲಿಯಾದರೂ ಸಹ ಗುಣಮುಖರಾಗದೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವಕನೊಬ್ಬನ ಹೊಸ ಬದುಕಿಗೆ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರು ಬೆಳಕಾಗಿದ್ದಾರೆ.
    ಮೂಲತಃ ತಾಲೂಕಿನ ಗೌರಾಪುರ ಶಿವನಿಕ್ರಾಸ್ ನಿವಾಸಿ ಸುಮಾರು ೨೩ ವರ್ಷ ವಯಸ್ಸಿನ ವಾಸುದೇವ(ಗುರು) ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಸುಮಾರು ೮ ತಿಂಗಳ ಹಿಂದೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಈತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವಾರು ತಿಂಗಳು ಚಿಕಿತ್ಸೆ ಪಡೆದರೂ ಗುಣಮುಖರಾಗಲಿಲ್ಲ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲೂ ಸಹ ಯಾವುದೇ ರೀತಿ ಗುಣಮುಖ ಕಾಣದೆ ಕೋಮಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿತ್ತು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಬದುಕುವುದು ಕಷ್ಟ ಎಂದು ಕೈ ಚೆಲ್ಲಿದ್ದರು. ಇದರಿಂದಾಗಿ ದಿಕ್ಕುತೋಚದೆ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು.
    ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಮತ್ತು ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪಿ. ಗಣೇಶ್‌ರಾವ್ ಕುಟುಂಬಸ್ಥರ ನೆರವಿಗೆ ಧಾವಿಸಿದ್ದು, ವೈದ್ಯರಿಗೆ ಕುಟುಂಬಸ್ಥರ ಪರಿಸ್ಥಿತಿ ಮನವರಿಕೆ ಮಾಡಿಕೊಡುವ ಮೂಲಕ ಕೋಮಾಸ್ಥಿತಿಯಲ್ಲಿದ್ದ ವಾಸುದೇವನಿಗೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸುವಲ್ಲಿ ಯಶಸ್ವಿಯಾದರು.
    ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಾ ತಜ್ಞ ಹಾಗು ಉದರ ತಜ್ಞ ಡಾ. ಡಿ.ಎಸ್ ಶಿವಪ್ರಕಾಶ್, ಡಾ. ಮಂಜುನಾಥ್ ಮತ್ತು ಡಾ. ಕವಿತಾ ಅವರನ್ನೊಳಗೊಂಡ ವೈದ್ಯರ ತಂಡ ಸುಮಾರು ೧ ತಿಂಗಳು ೧೦ ದಿನಗಳವರೆಗೆ ನಿರಂತರವಾಗಿ ಚಿಕಿತ್ಸೆ ನೀಡುವ ಮೂಲಕ ಕೋಮಸ್ಥಿತಿಯಿಂದ ಮರಳಿ ಸಂಪೂರ್ಣವಾಗಿ ಚೇತರಿಕೆ ಹಂತಕ್ಕೆ ಬಂದು ತಲುಪಿದ್ದು, ಇದರಿಂದಾಗಿ ಕುಟುಂಬಸ್ಥರು ಮಾತ್ರವಲ್ಲ ಇತರರು ಸಹ ವೈದ್ಯರ ಆರೈಕೆ, ಕಾಳಜಿ ಹಾಗು ಸಾಮರ್ಥ್ಯಕ್ಕೆ ಬೆರಗಾಗಿದ್ದಾರೆ.
    ಕುಟುಂಬಸ್ಥರು ಪತ್ರಿಕೆಯೊಂದಿಗೆ ಮಾತನಾಡಿ, ನಮ್ಮ ಬಳಿ ಇದ್ದ ಜಮೀನು ಸೇರಿದಂತೆ ಎಲ್ಲವನ್ನು ಮಾರಾಟ ಮಾಡಿ ಸುಮಾರು ೧೦ ಲಕ್ಷ ರು. ಗಳಿಗೂ ಹೆಚ್ಚು ಹಣ ಚಿಕಿತ್ಸೆಗಾಗಿ ಖರ್ಚು ಮಾಡಲಾಗಿತ್ತು. ಆದರೂ ಸಹ ವಾಸುದೇವ ಬದುಕುವುದಿಲ್ಲ ಎಂಬ ಆತಂಕ ಎದುರಾಗಿತ್ತು. ಕೊನೆ ಘಳಿಗೆಯಲ್ಲಿ ಇಲ್ಲಿನ ತಾಲೂಕು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯರು ಹೆಚ್ಚಿನ ಆರೈಕೆ, ಕಾಳಜಿಯೊಂದಿಗೆ ಚಿಕಿತ್ಸೆ ನೀಡಲು ಆರಂಭಿಸಿದ ನಂತರ ಹಂತ ಹಂತವಾಗಿ ಚೇತರಿಕೆ ಕಂಡಿದ್ದು, ನಿಜಕ್ಕೂ ಸರ್ಕಾರಿ ಆಸ್ಪತ್ರೆ  ವೈದ್ಯರ ಸಾಮಾರ್ಥ್ಯ ಬೆರಗುಗೊಳಿಸಿದೆ. ಈ ಹಿನ್ನಲೆಯಲ್ಲಿ ವೈದ್ಯರ ತಂಡಕ್ಕೆ ಹಾಗು ಸಾಮಾಜಿಕ ಹೋರಾಟಗಾರ ಶಿವಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪಿ. ಗಣೇಶ್‌ರಾವ್ ಸೇರಿದಂತೆ ನೆರವಾದವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

No comments:

Post a Comment