Tuesday, December 27, 2022

ಶೀಘ್ರದಲ್ಲಿಯೇ ಪ್ರತಿಷ್ಠಾಪನೆಗೊಳ್ಳಲಿದೆ ಅಂಬೇಡ್ಕರ್ ವೃತ್ತದಲ್ಲಿ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ

ಮಹಾರಾಷ್ಟ್ರದ ಗಾರ್ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ೨೮ ಲಕ್ಷ ರು. ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ

ಭದ್ರಾವತಿಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಭಾರತರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೆ ಸುಮಾರು ೨ ವರ್ಷಗಳ ಹಿಂದೆಯೇ ವೇದಿಕೆ ನಿರ್ಮಿಸಿರುವುದು.
    ಭದ್ರಾವತಿ, ಡಿ. ೨೭: ದಲಿತ ಸಂಘಟನೆಗಳ ಹೋರಾಟದ ಫಲವಾಗಿ ಕೊನೆಗೂ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಭಾರತರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ.
    ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್‌ರವರ ಪ್ರತಿಮೆ ಪ್ರತಿಸ್ಥಾಪಿಸಬೇಕೆಂದು ಆಗ್ರಹಿಸಿ ದಲಿತಪರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿದ ಹಿನ್ನಲೆಯಲ್ಲಿ ಈ ಹಿಂದೆ ಬಿ.ಎಸ್ ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಆದರೆ ಈ ಪ್ರತಿಮೆ ಕುಬ್ಜ ರೀತಿಯಲ್ಲಿದ್ದು, ಅಂಬೇಡ್ಕರ್‌ರವರಿಗೆ ಅವಮಾನ ಮಾಡುವ ರೀತಿಯಲ್ಲಿ ಕಂಡು ಬರುತ್ತಿದೆ. ಈ ಪ್ರತಿಮೆಯನ್ನು ಬದಲಾಯಿಸಿ ಅಂಬೇಡ್ಕರ್‌ರವರನ್ನು ಹೋಲುವ ಹಾಗು ಸುಂದರವಾಗಿ ಕಾಣುವ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಬೇಕೆಂಬ ಹೋರಾಟ ಆರಂಭಗೊಂಡಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಈ ಹಿಂದಿನ ಪೌರಾಯುಕ್ತರಾಗಿದ್ದ ಮನೋಹರ್‌ರವರು ನಗರಸಭೆ ವತಿಯಿಂದ ಪ್ರತಿಮೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಪ್ರತಿಷ್ಠಾಪನೆಗಾಗಿ ಅಂಬೇಡ್ಕರ್ ವೃತ್ತವನ್ನು ನವೀಕರಣಗೊಳಿಸಿ ವೇದಿಕೆ ಸಹ ನಿರ್ಮಿಸಿಕೊಟ್ಟಿದ್ದರು. ಆದರೆ ಪ್ರತಿಮೆ ಮಾತ್ರ ಸುಮಾರು ೨ ವರ್ಷ ಕಳೆದರೂ ಸಹ ಪ್ರತಿಸ್ಥಾಪನೆಗೊಂಡಿಲ್ಲ. ಇದೀಗ ಪ್ರತಿಷ್ಠಾಪನೆಗೆ ಸಿದ್ದತೆಗಳು ನಡೆಯುತ್ತಿದ್ದು, ಮಹಾರಾಷ್ಟ್ರದ ಗಾರ್ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ೨೮ ಲಕ್ಷ ರು. ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಿ ಕೊಡಲು ಮುಂದಾಗಿದೆ.
    ಇಂದಿನ ಪೌರಾಯುಕ್ತ ಮನುಕುಮಾರ್‌ರವರು ಇತ್ತೀಚೆಗೆ ಸಭೆ ನಡೆಸಿ ದಲಿತ ಸಂಘಟನೆಗಳ ಮುಖಂಡರು, ಅಭಿಮಾನಿಗಳು ಹಾಗು ಚುನಾಯಿತ ಪ್ರತಿನಿಧಿಗಳ ಸಲಹೆ, ಸೂಚನೆ ಮೇರೆಗೆ ತೀರ್ಮಾನ ಕೈಗೊಂಡು ೧೨ ಅಡಿ ಎತ್ತರದ ಕಂಚಿನ ಪ್ರತಿಮೆಗೆ ೩೫ ಲಕ್ಷ ರು. ಅಂದಾಜು ವೆಚ್ಚ ತಯಾರಿಸಿ ಟೆಂಡರ್ ಆಹ್ವಾನಿಸಿದ್ದರು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಗಾರ್ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕಡಿಮೆ ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಿ ಕೊಡಲು ಮುಂದೆ ಬಂದಿದೆ.
    ದಲಿತಪರ ಸಂಘಟನೆಗಳು ಶಾಸಕ ಬಿ.ಕೆ.ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮತ್ತು ಪೌರಾಯುಕ್ತ ಮನುಕುಮಾರ್ ಹಾಗು ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿವೆ.  


ಭದ್ರಾವತಿಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಭಾರತರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗಾಗಿ ನೀಲ ನಕ್ಷೆ ರಚಿಸಿ ಟೆಂಡರ್ ಆಹ್ವಾನಿಸಿರುವುದು.  

No comments:

Post a Comment