Sunday, January 1, 2023

ಪತ್ರಿಕೆ ವಿತರಣೆ ಮಾಡುವುದು ಕೀಳರಿಮೆ ವೃತ್ತಿಯಲ್ಲ : ಮಧುಕರ್ ವಿ. ಕಾನಿಟ್ಕರ್

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆಯಲ್ಲಿ ಪತ್ರಿಕಾ ವಿತರಕರ ಒಕ್ಕೂಟದಿಂದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಜ. ೧ : ಮನೆ ಮನೆಗಳಿಗೆ ದಿನ ಪತ್ರಿಕೆ ವಿತರಣೆ ಮಾಡುವ ವೃತ್ತಿ ಕೀಳರಿಮೆಪಡುವ ಕಾಯಕವಲ್ಲ. ಅದು ಶ್ರೇಷ್ಟತೆ ಹೊಂದಿರುವ ಅಮೂಲ್ಯ ವೃತ್ತಿಯಾಗಿದೆ ಎಂದು ತರುಣ ಭಾರತಿ ವಿಸ್ವಸ್ಥ ಮಂಡಳಿ ಕಾರ್ಯದರ್ಶಿ ಮಧುಕರ್ ವಿ. ಕಾನಿಟ್ಕರ್ ಹೇಳಿದರು.
    ಅವರು ಭಾನುವಾರ ನ್ಯೂಟೌನ್ ಜ್ಯೂನಿಯರ್ ಪಾಲಿಟೆಕ್ನಿಕ್ ಶಾಲೆ(ಜೆಟಿಎಸ್) ಸಮೀಪದಲ್ಲಿರುವ ಶುಗರ್‌ಟೌನ್ ಲಯನ್ಸ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು. ನಾನು ಸಹ ಬಾಲ್ಯದಲ್ಲಿ ಸುಮಾರು ೧೨ ವರ್ಷಗಳ ಕಾಲ ಪತ್ರಿಕೆಗಳನ್ನು ವಿತರಣೆ ಮಾಡಿದ್ದೇನೆ. ಈ ಹಿನ್ನಲೆಯಲ್ಲಿ ಪತ್ರಿಕೆ ವಿತರಕರ ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ ಎಂದರು.
    ಪತ್ರಿಕೆ ವಿತರಣೆ ಮಾಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪತ್ರಿಕೆ ವಿತರಣೆ ಮಾಡುವುದು ಸುಲಭದ ಮಾತಲ್ಲವಾದರು ಪ್ರಜ್ಞಾಪೂರ್ವಕವಾಗಿ ಜನರನ್ನು ಮುಟ್ಟುವ ಹೆಮ್ಮೆಯ ಸಾಧನವಾಗಿದ್ದೀರಿ. ನೀವೆಲ್ಲರೂ ಒಗ್ಗಟ್ಟಾಗಿ ಸರಕಾರಗಳ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದರು.
    ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಕ್ತಾರ್ ಆಹಮ್ಮದ್ ಮಾತನಾಡಿ, ಪತ್ರಿಕಾ ವಿತರಕರು ಕೊರೊನಾ ಕಾಲದಲ್ಲಿ ವಾರಿಯರ‍್ಸ್ ಎಂದು ಬಿರುದು ಪಡೆದು ಒಗ್ಗಟ್ಟಿನಲ್ಲಿ ವಿಫಲರಾಗಿದ್ದಾರೆ. ಚಿಂದಿ ಆರಿಸುವವರ ಕಲ್ಯಾಣಕ್ಕೆ ಸರಕಾರ ೩೫೦ ಕೋಟಿ ರು. ನೀಡಿದೆ. ಆದರೆ ಪತ್ರಿಕಾ ವಿತರಕರು ಒಗ್ಗಟ್ಟಿಲ್ಲದೆ ಅವರಿಗಿಂತ ಕೀಳಾಗಿದ್ದಾರೆ. ಇವೆಲ್ಲವನ್ನು ಗಮನಿಸಿದ ಒಕ್ಕೂಟದ ರಾಜ್ಯಾಧ್ಯಕ್ಷರ ಹೋರಾಟದಿಂದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ರವರು ಪತ್ರಿಕಾ ವಿತರಕರಿಗೆ ಇ-ಶ್ರಮ್ ಮತ್ತು ಪ್ರಧಾನ ಮಂತ್ರಿಗಳ ಆರೋಗ್ಯ ಕಾರ್ಡುಗಳು ದೊರೆಯುವಂತೆ ಮಾಡಿದ್ದಾರಲ್ಲದೆ, ಇತ್ತೀಚೆಗೆ ಸಾಗರದ ಪತ್ರಿಕಾ ವಿತರಕ ಅಪಘಾತದಲ್ಲಿ ಸಾವು ಕಂಡು ಆ ಬಡ ಕುಟುಂಬಕ್ಕೆ ೨ ಲಕ್ಷ ರು. ಪರಿಹಾರ ದೊರಕಿಸಿ ಕೊಟ್ಟಿದ್ದಾರೆ. ಆದ್ದರಿಂದ ಇಲ್ಲಿನ ವಿತರಕರು ಕೀಳರಿಮೆ ಬಿಟ್ಟು ಎಲ್ಲರೂ ಸಂಘಟಿತರಾಗಿ ಎಂದರು.
    ಶುಗರ್‌ಟೌನ್ ಲಯನ್ಸ್ ಕ್ಲಬ್ ಕಣ್ಣಿನ ಆಸ್ಪತ್ರೆ ಕಾರ್ಯದರ್ಶಿ ಮಲ್ಲಿಕಾರ್ಜುನ್, ಹಿರಿಯ ಪತ್ರಕರ್ತರಾದ ಎನ್. ಬಾಬು, ಕೆ.ಎನ್.ರವೀಂದ್ರನಾಥ್ ಮಾತನಾಡಿದರು. ಪತ್ರಕರ್ತ ಅನಂತಕುಮಾರ್ ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಪರಶುರಾಮ್, ಸೋಮಶೇಖರ್, ಮಧು, ಯತೀಶ್, ನಿಂಗೋಜಿರಾವ್, ಸತ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment