Sunday, January 29, 2023

ಕ್ರೈಸ್ತ ಸಮುದಾಯಕ್ಕೆ ಜಮೀನು : ಶಾಸಕರು ನೀಡಿದ ಭರವಸೆಯಂತೆ ನಡೆದುಕೊಳ್ಳಲಿ

ತೆಲುಗು ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಜೆ. ಭಾಸ್ಕರ್ ಆಗ್ರಹ

ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತೆಲುಗು ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಜೆ. ಭಾಸ್ಕರ್ ಮಾತನಾಡಿದರು.
    ಭದ್ರಾವತಿ, ಜ. ೨೯: ಕ್ರೈಸ್ತ ಸಮುದಾಯಕ್ಕೆ ೨೬ ಗುಂಟೆ ಜಮೀನು ನೀಡುವುದಾಗಿ ಭರವಸೆ ನೀಡಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಈಗ ಕೇವಲ ೧೩ ಗುಂಟೆ ಜಮೀನು ಮಾತ್ರ ನೋಂದಣಿ ಮಾಡಿಕೊಟ್ಟಿದ್ದಾರೆ. ಇದನ್ನು ತೆಲುಗು ಕ್ರಿಶ್ಚಿಯನ್ ಅಸೋಸಿಯೇಷನ್ ವಿರೋಧಿಸುತ್ತದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜೆ. ಭಾಸ್ಕರ್ ಆರೋಪಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ನಗರದ ಬುಳ್ಳಾಪುರ ಗ್ರಾಮದಲ್ಲಿ ೨೦೧೦ನೇ ಇಸವಿಯಲ್ಲಿ ೨೬ ಗುಂಟೆ ಜಾಗವನ್ನು ಕ್ರಿಶ್ಚಿಯನ್ ಅಸೋಸಿಯೇಷನ್‌ಗೆ ನೀಡುವುದಾಗಿ ಭರವಸೆ ನೀಡಿದ್ದ ಶಾಸಕ ಸಂಗಮೇಶ್ವರ್ ಅವರು ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಚಾರಿಟಬಲ್ ಟ್ರಸ್ಟ್ ಹೆಸರಿಗೆ ಇತ್ತೀಚೆಗೆ ೧೩ ಗುಂಟೆ ಜಾಗವನ್ನು ಮಾತ್ರ ನೋಂದಣಿ ಮಾಡಿಕೊಟ್ಟಿದ್ದಾರೆ.  ಇದು ಸರಿಯಲ್ಲ. ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕಾದ ಶಾಸಕರು ಮಾತಿಗೆ ತಪ್ಪಿದ್ದಾರೆ. ಕ್ರೈಸ್ತ ಸಮುಧಾಯಕ್ಕೆ ಮಾತಿನಂತೆ ೨೬ ಗುಂಟೆ ಜಾಗ ಕೊಡಬೇಕು ಇಲ್ಲವಾದಲ್ಲಿ ಈ ಚುನಾವಣೆಯಲ್ಲಿ ನಮ್ಮ ಸಮುದಾಯದಿಂದ ತಕ್ಕ ಪಾಠ ಕಲಿಸುತ್ತೇವೆ ಎಂದು ಕಿಡಿಕಾರಿದರು.
    ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಎರಡು ಕಣ್ಣುಗಳಿದ್ದಂತೆ ಎಂದು ಹೇಳುವ ಎಲ್ಲಾ ಪಕ್ಷಗಳ ರಾಜಕಾರಣಿಗಳೇ ಇಂದು ಕಾರ್ಖಾನೆಯನ್ನು ಮುಚ್ಚುತ್ತಿದ್ದಾರೆ. ಕಾರ್ಖಾನೆಗಳ ರಕ್ಷಣೆಗೆ ಕೇವಲ ರಾಜಕಾರಣಿಗಳ ಹೋರಾಟ ಸಾಲದು. ದೊಡ್ಡಮಟ್ಟದ ಹೋರಾಟ ಎಲ್ಲಾ ಸಮುದಾಯದ ಜನರಿಂದ, ಪಾದ್ರಿಗಳು, ಮುಸ್ಲಿಂ ಗುರುಗಳು, ಆಟೋಚಾಲಕರು, ಕೂಲಿ ಕಾರ್ಮಿಕರು. ರೈತರು ಒಟ್ಟಾಗಿ ಸೇರಿ ಹೋರಾಟಕ್ಕೆ ಧುಮುಕಿದಾಗ ಮಾತ್ರ ಕಾರ್ಖಾನೆಗಳು ಉಳಿಯಲು ಸಾಧ್ಯವಾಗುತ್ತದೆ.ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ್‌ಬಾಬು, ಕುಮಾರ್, ಫಾಸ್ಟರ್‌ಗಳಾದ  ಅಂತೋಣಿ, ಪ್ರಕಾಶ್, ಉಮೇಶ್, ಸ್ಟೀಫನ್ ಸೇರಿದಂತೆ ಇನ್ನಿತರರ ಉಪಸ್ಥಿತರಿದ್ದರು.

No comments:

Post a Comment