೧೧ ದಿನ ಪೂರೈಸಿದ ಗುತ್ತಿಗೆ ಕಾರ್ಮಿಕರ ಹೋರಾಟ : ಪತ್ರಕರ್ತರ ಸಂಘ ಬೆಂಬಲ
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಭಾನುವಾರ ೧೧ನೇ ದಿನ ಪೂರೈಸಿತು. ಈ ನಡುವೆ ಹೋರಾಟಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬೆಂಬಲ ಸೂಚಿಸಿದೆ.
ಭದ್ರಾವತಿ, ಜ. ೨೯ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಭಾನುವಾರ ೧೧ನೇ ದಿನ ಪೂರೈಸಿತು. ಈ ನಡುವೆ ಹೋರಾಟಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬೆಂಬಲ ಸೂಚಿಸಿದೆ.
ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು ೧೦ಕ್ಕೂ ಹೆಚ್ಚು ಪತ್ರಕರ್ತರು ಸಹ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತರು, ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳಬೇಕೆಂಬ ದೃಢ ನಿರ್ಧಾರದೊಂದಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಲಾಗುತ್ತಿದೆ. ಕಾರ್ಖಾನೆಯ ಮುಚ್ಚುವ ಆದೇಶ ಹಿಂಪಡೆಯಬೇಕು ಮತ್ತು ಗುತ್ತಿಗೆ ಕಾರ್ಮಿಕರ ಹಿತಕಾಪಾಡಬೇಕೆಂಬ ಬೇಡಿಕೆಗಳು ಪ್ರಮುಖವಾಗಿವೆ. ಈ ನಿಟ್ಟಿನಲ್ಲಿಯೇ ಹೋರಾಟ ಮುನ್ನಡೆಯಬೇಕು. ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲು ಬದ್ಧರಾಗಿದ್ದೇವೆ. ಹೋರಾಟಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸಂಘದ ವತಿಯಿಂದ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗು ರಾಜ್ಯದ ೨೭ ಸಂಸದರು ಮತ್ತು ರಾಜ್ಯಸಭಾ ಸದಸ್ಯರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಸಾಮಾಜಿಕ ಜಾಲತಾಣಗಳನ್ನು ಹೋರಾಟಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು. ಕ್ಷೇತ್ರದ ಪ್ರತಿಯೊಬ್ಬರು ಸಹ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸಂಘದ ನಿರ್ಧಾರವನ್ನು ಜಿಲ್ಲಾ ಮತ್ತು ರಾಜ್ಯ ಸಂಘಕ್ಕೂ ತಿಳಿಸುವ ಮೂಲಕ ಹೋರಾಟಕ್ಕೆ ಹೆಚ್ಚಿನ ಶಕ್ತಿ ತುಂಬುವುದಾಗಿ ಭರವಸೆ ನೀಡಿದರು.
ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಕಾರ್ಖಾನೆ ಆದೇಶ ಹಿಂಪಡೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಹೋರಾಟಕ್ಕೆ ದಿನದಿಂದ ದಿನಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದ್ದು, ಅದರಲ್ಲೂ ಪತ್ರಕರ್ತರು ಬೆಂಬಲ ನೀಡಿರುವುದು ಆನೆ ಬಲ ಬಂದಂತಾಗಿದೆ ಎಂದರು.
ಹಿರಿಯ ಪತ್ರಕರ್ತರಾದ ಕಣ್ಣಪ್ಪ, ಎನ್. ಬಾಬು, ಗಂಗಾನಾಯ್ಕ ಗೊಂದಿ, ಜಿ. ಸುಭಾಷ್‌ರಾವ್ ಸಿಂಧ್ಯಾ, ಟಿವಿ-೫ ಸುದ್ದಿವಾಹಿನಿ ಸಂಪಾದಕ ಸತೀಶ್, ಸಂಯುಕ್ತ ಕರ್ನಾಟಕ ಪತ್ರಿಕೆ ದಾವಣಗೆರೆ ಆವೃತ್ತಿ ಉಪಸಂಪಾದಕ ರಂಗನಾಥರಾವ್, ದಿ ಹಿಂದೂ ಪತ್ರಿಕೆ ವರದಿಗಾರ ವೀರೇಂದ್ರ, ಜಿ. ಮಹಾಂತೇಶ್, ಅನಂತಕುಮಾರ್, ರವೀಂದ್ರನಾಥ್(ಬ್ರದರ‍್ಸ್), ಸುಧೀಂದ್ರ ಸೇರಿದಂತೆ ಇನ್ನಿತರರು ಮಾತನಾಡಿದರು. ಬಸವರಾಜ್, ಸುದರ್ಶನ್, ಶಿವಶಂಕರ್, ಬಿ.ಆರ್ ಬದರಿನಾರಾಯಣ, ಕೆ.ಆರ್ ಶಂಕರ್, ಫಿಲೋಮಿನಾ, ಕೂಡ್ಲಿಗೆರೆ ಮಂಜುನಾಥ್, ಶೈಲೇಶ್ ಕೋಠಿ, ಧನಂಜಯ, ಮಹೇಶ್ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು, ಮಹಿಳೆಯರು ಪಾಲ್ಗೊಂಡಿದ್ದರು.
No comments:
Post a Comment