ಭದ್ರಾವತಿಯಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.
ಭದ್ರಾವತಿ, ಜ. ೧೧ : ಮಕ್ಕಳ ಕಲಿಕಾ ಮಾಧ್ಯಮ ಯಾವುದೇ ಇರಲಿ ಅವರಿಗೆ ಕನ್ನಡ ಭಾಷೆ ಕಲಿಸುವಲ್ಲಿ ಪೋಷಕರು ಹೆಚ್ಚಿನ ಗಮನ ಹರಿಸಬೇಕೆಂದು ತಾಂತ್ರಿಕ ಅಭಿಯಂತರರಾದ ಶ್ರದ್ದಾ ಹೇಳಿದರು.
ಅವರು ಬುಧವಾರ ತಾಲೂಕು ಕನ್ನಡ ಸಾಹಿತ್ಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ದಿನದರ್ಶಿಕೆ ಕಾರ್ಯಕ್ರಮ ಎಳ್ಳುಬೆಲ್ಲ ಹಂಚುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲರೂ ನೆಲ, ಜಲ, ಭಾಷೆ ಎಲ್ಲವನ್ನು ಉಳಿಸಿ ಬೆಳೆಸಬೇಕು. ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಿದ್ದು, ಈ ಹಿನ್ನಲೆಯಲ್ಲಿ ಮಕ್ಕಳು ಆಂಗ್ಲ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದರೂ ಸಹ ಅವರಿಗೆ ಕನ್ನಡ ಭಾಷೆ ಕಲಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕೆಂದರು.
ದಿನದರ್ಶಿಕೆ ಬಿಡುಗಡೆಗೊಳಿಸಿದ ಉದ್ಯಮಿ ಬಿ.ಕೆ ಜಗನ್ನಾಥ ಮಾತನಾಡಿ, ಪರಿಷತ್ ವತಿಯಿಂದ ಕನ್ನಡ ನಾಡು, ತಾಯಿ ಭುವನೇಶ್ವರಿ ಹಾಗು ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನೊಳಗೊಂಡಿರುವ ಸಂಪೂರ್ಣವಾಗಿ ಕನ್ನಡದಲ್ಲಿ ಮುದ್ರಿತಗೊಂಡಿರುವ ದಿನದರ್ಶಿಕೆ ಆಕರ್ಷಕವಾಗಿದೆ. ಪ್ರತಿಯೊಬ್ಬರು ಕನ್ನಡ ಭಾಷೆ ಮೇಲೆ ಪ್ರೀತಿ ಹೊಂದಬೇಕು. ಈ ನಿಟ್ಟಿನಲ್ಲಿ ದಿನದರ್ಶಿಕೆ ಜನರ ಮನಸ್ಸಿನಲ್ಲಿ ಭಾವನೆಯುನ್ನುಂಟು ಮಾಡಲಿ. ಪರಿಷತ್ ಕಾರ್ಯ ಚಟುವಟಿಕೆಗಳು ನಿರಂತರವಾಗಿ ಮುಂದುವರೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೆ.ಎನ್ ಶ್ರೀಹರ್ಷ, ವೀರಭದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ಜಾನಪದ ಪರಿಷತ್ ಅಧ್ಯಕ್ಷ ಕೋಗಲೂರು ಯಜ್ಞಯ್ಯ, ಪರಿಷತ್ ಖಜಾಂಚಿ ಕೆ.ಟಿ ಪ್ರಸನ್ನ, ಸಂಘಟನಾ ಕಾರ್ಯದರ್ಶಿಗಳಾದ ನಾಗೋಜಿರಾವ್, ಕಮಲಕರ್, ಪರಿಷತ್ ಹೊಳೆಹೊನ್ನೂರು ಅಧ್ಯಕ್ಷ ಸಿದ್ದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುಮತಿ ಕಾರಂತ್ ಪ್ರಾರ್ಥಿಸಿ, ಪರಿಷತ್ ಕಾರ್ಯದರ್ಶಿ ಎಂ.ಈ ಜಗದೀಶ್ ಸ್ವಾಗತಿಸಿದರು. ಎಚ್. ತಿಮ್ಮಪ್ಪ ನಿರೂಪಿಸಿದರು.
No comments:
Post a Comment