ಭದ್ರಾವತಿಯಲ್ಲಿ ಕೆಆರ್‌ಎಸ್ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ ಜನನಿ ವತ್ಸಲ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಜಂಟಿ ಕಾರ್ಯದರ್ಶಿ ಪುಷ್ಪ, ರಾಮೇಶ್ವರಿ, ಅಂಬಿಕಾ ಸೆರಿದಂತೆ ಇನ್ನಿತರರಿದ್ದರು.
ಭದ್ರಾವತಿ, ಜ. ೧೧: ಪ್ರಾಮಾಣಿಕ, ಜನಪರ ಕಾಳಜಿ ಹೊಂದಿರುವ ವಿದ್ಯಾವಂತ ಮಹಿಳೆಯರಿಗೆ ರಾಜಕೀಯ ರಂಗ ಪ್ರವೇಶಿಸಲು 'ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ' ಮುಕ್ತ ಅವಕಾಶ ನೀಡಲಿದ್ದು, ಆಸಕ್ತ ಸ್ವಾಭಿಮಾನಿ ಕನ್ನಡದ ಮಹಿಳೆಯರು ಪಕ್ಷ ಸೇರ್ಪಡೆಗೆ ಮುಂದಾಗುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿ, ಮಹಿಳಾ ಉಸ್ತುವಾರಿ ಜನನಿ ವತ್ಸಲಾ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ವಿಧಾನಸಭೆಯಲ್ಲಿ ಮಹಿಳಾ ಶಕ್ತಿ ವೃದ್ದಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಪಕ್ಷವು ಮಹಿಳೆಯರನ್ನು ರಾಜಕೀಯಕ್ಕೆ ಆಹ್ವಾನಿಸುತ್ತಿದೆ. ಪ್ರ್ರಾಮಾಣಿಕ ರಾಜಕಾರಣ ಮಾಡಬಯಸುವ ಅರ್ಹ ಮಹಿಳೆಯರು ಪಕ್ಷಕ್ಕೆ ಸೇರ್ಪಡೆಕೊಳ್ಳಬೇಕೆಂದು ಮನವಿ ಮಾಡಿದರು.
ಇತ್ತೀಚೆಗೆ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಅಷ್ಟಾಗಿ ಕಂಡು ಬರುತ್ತಿಲ್ಲ. ಪ್ರಸ್ತುತ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯಂತಹ ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿಲ್ಲ. ಮಹಿಳೆಯರಿಗೆ ಲಭಿಸಬೇಕಾದ ರಾಜಕೀಯ ಸ್ಥಾನಮಾನಗಳನ್ನು ನೀಡುತ್ತಿಲ್ಲ. ಮಹಿಳಾ ಮೀಸಲಿರುವ ಕಡೆಯಲ್ಲಿಯೂ ಕೂಡ ಪುರುಷ ಪ್ರಾಬಲ್ಯವೇ ನಡೆಯುತ್ತಿದೆ. ಶಾಸನಸಭೆಯಲ್ಲಿ ಮಹಿಳೆಯರ ಬಗ್ಗೆ ಧ್ವನಿ ಎತ್ತುವಂತಹ ಮಹಿಳಾ ನಾಯಕಿಯರು ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ರೈತಪರ, ಹೋರಾಟಪರ ಮಹಿಳೆಯರು ಕೆಆರ್‌ಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದು ಅವಶ್ಯಕವಾಗಿದೆ ಎಂದರು.
ಆರಂಭದಲ್ಲಿ ಕೇವಲ ೨೦ ಕಾರ್ಯಕರ್ತರಿಂದ ಆರಂಭವಾದ ಪಕ್ಷದಲ್ಲಿ ಈಗ ೩೦ ಸಾವಿರ ಕಾರ್ಯಕರ್ತರಿದ್ದಾರೆ. ಪಕ್ಷದ ನಿಲುವುಗಳಿಗೆ ಬದ್ಧರಾಗಿ ಸ್ವಚ್ಚ, ಜನಪರ ರಾಜಕಾರಣ ನಡೆಸಲು ನಿತ್ಯ ಸಾಕಷ್ಟು ಜನರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ 'ಸ್ವಾಭಿಮಾನಿ ಕನ್ನಡದ ಹೆಣ್ಣೇ ಪವಿತ್ರ ರಾಜಕಾರಣಕ್ಕೆ ಮುಂದಾಗು' ಎನ್ನುವ ಅಭಿಯಾನ ಆರಂಭಿಸಿದ್ದು, ಈಗಾಗಲೇ ಎರಡು ಹಂತದಲ್ಲಿ ಅಭಿಯಾನ ಮುಕ್ತಾಯಗೊಳಿಸಲಾಗಿದೆ. ಇದೀಗ ೩ನೇ ಹಂತದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚನ್ನಗಿರಿ, ಚಿತ್ರದುರ್ಗ ನಗರಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಹಿಳಾ ಘಟಕದ ಜಂಟಿ ಕಾರ್ಯದರ್ಶಿ ಪುಷ್ಪ, ರಾಮೇಶ್ವರಿ, ಅಂಬಿಕಾ, ಆನೇಕಲ್ ಜಯರಾಂ, ನಾಗರಾಜ್‌ರಾವ್ ಸಿಂಧೆ, ತ್ಯಾಗರಾಜ್, ಶಬರೀಶ್, ಸುಮಿತ್ರಾಬಾಯಿ, ಕಲಾವತಿ, ನಾಗರಾಜ್, ನಾಗರತ್ನಮ್ಮ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment