ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ತಾಲೂಕು ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿತು.
ಭದ್ರಾವತಿ, ಜ. ೨೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ತಾಲೂಕು ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೈಸೂರು ಮಹಾರಾಜರ ಮತ್ತು ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಹೆಸರು ಉಳಿಸಲು ಈ ಕಾರ್ಖಾನೆಯನ್ನು ಮುಚ್ಚದಂತೆ ತಡೆಯಬೇಕೆಂದು ಅಧ್ಯಕ್ಷ ಎ.ಟಿ.ರವಿ ಮನವಿ ಮಾಡಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆಯನ್ನು ಅಭಿವೃದ್ದಿಪಡಿಸಿ ಕಾರ್ಮಿಕರನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರದ ಉಕ್ಕು ಪ್ರಾಧಿಕಾರದ ಸಹಭಾಗಿತ್ವಕ್ಕೆ ಅಂದಿನ ಪ್ರಧಾನಿ ದಿವಂಗತ ರಾಜೀವ್‌ಗಾಂಧಿರವರಿಗೆ ರಾಜ್ಯ ಸರ್ಕಾರ ಹಸ್ತಾಂತರಿಸಿತ್ತು. ಆದರೆ ಕೇಂದ್ರ ಸರ್ಕಾರ ಬಂಡವಾಳ ತೊಡಗಿಸಿ ಅಭಿವೃದ್ದಿಪಡಿಸದೆ ನಿರ್ಲಕ್ಷ್ಯವಹಿಸಿತ್ತು. ನಂತರ ಕಾರ್ಖಾನೆಗೆ ಕಾಯಕಲ್ಪ ನೀಡಲು ಪ್ರಧಾನಿಯಾಗಿದ್ದ ಎಚ್.ಡಿ ದೇವೇಗೌಡರು ಕಾರ್ಖಾನೆಯನ್ನು ಸಂಪೂರ್ಣವಾಗಿ ಉಕ್ಕು ಪ್ರಾಧಿಕಾರಕ್ಕೆ ಸೇರ್ಪಡೆಗೊಳಿಸಿ ಜೀವ ತುಂಬಿದ್ದರು ಎಂದರು.
ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಸ್ತಿತ್ವಕ್ಕೆ ಬಂದ ನೀತಿ ಆಯೋಗ ಕೈಗೊಂಡ ತಪ್ಪು ನಿರ್ಧಾರಗಳ ಪರಿಣಾಮ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಮುಂದಾಗಿ ಟೆಂಡರ್ ಪ್ರಕಟಿಸಿದ್ದು, ನಂತರದ ಬೆಳೆವಣಿಗೆಯಲ್ಲಿ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಬಂಡವಾಳಶಾಹಿಗಳು ಆಸಕ್ತಿ ತೋರಿಸದ ಕಾರಣ ಇದೀಗ ಕಾರ್ಖಾನೆಯನ್ನು ಮುಚ್ಚಲು ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಉಕ್ಕು ಪ್ರಾಧಿಕಾರ ಕಾರ್ಖಾನೆಯನ್ನು ಮುಚ್ಚಲು ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಕಾರ್ಖಾನೆಯನ್ನು ನಂಬಿ ಬದುಕುತ್ತಿರುವ ಕಾರ್ಮಿಕರು, ಅವಲಂಬಿತರು, ಗುತ್ತಿಗೆ ಕಾರ್ಮಿಕರು ಕಂಗಾಲಾಗಿದ್ದಾರೆ. ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟು ಕಾರ್ಮಿಕರು ಬೀದಿಪಾಲಾಗಿದ್ದಾರೆ. ಮನೆಗಳು ಪಾಳುಬಿದ್ದು ಹಾಳಾಗಿ, ಸ್ಮಶಾನ ಮೌನ ಆವರಿಸಿದೆ. ಇದೀಗ ವಿಐಎಸ್‌ಎಲ್ ಮುಚ್ಚಿದರೆ ಇಡೀ ಊರು ಪಾಳುಬಿದ್ದ ಕೊಂಪೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನಗರದ ಅನೇಕ ಮುಖಂಡರು ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಿ ಕಾರ್ಖಾನೆ ಮುಚ್ಚುವುದನ್ನು ತಡೆಯುವಂತೆ ಕೋರಲಾಗಿದೆ. ಇದೆ ರೀತಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಮೂಲಕ ಸಹ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದರು.
ಗುತ್ತಿಗೆ ಕಾರ್ಮಿಕರ ಧರಣಿಗೆ ಬೆಂಬಲ:
ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಚ್ಚುವ ವಿಚಾರ ತಿಳಿದು ಆತಂಕಗೊಂಡು ಕಾರ್ಖಾನೆ ಮುಂಭಾಗದಲ್ಲಿ ಧರಣಿ ಕೈಗೊಂಡಿದ್ದಾರೆ. ಅವರ ಹೋರಾಟಕ್ಕೆ ತಾಲೂಕು ಒಕ್ಕಲಿಗರ ಸಂಘ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುತ್ತದೆ. ಅಗತ್ಯ ಬಿದ್ದರೆ ಭದ್ರಾವತಿ ಬಂದ್ ಸಹ ನಡೆಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಸಂಘದ ಪದಾಧಿಕಾರಿಗಳು, ಮುಖಂಡರು, ಪೋಷಕರಾದ ರಾಜು, ರಾಧಾ, ಉಮೇಶ್, ಕಾರ್ತಿಕ್, ಗೊಂದಿ ಜಯರಾಂ, ಚೆನ್ನಗಪ್ಪ, ಎಪಿಎಂಸಿ ಜಯರಾಂ, ಕುಮಾರ್, ಎಸ್.ರಾಜು, ಶಾಂತರಾಜ್, ಅಣ್ಣೇಗೌಡ, ರಾಮೇಗೌಡ, ಮಂಜುನಾಥ್, ನಾಗರಾಜ್, ಶ್ರೀಧರ್, ಕುಂಬ್ರಿ ಚಂದ್ರಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment