Friday, January 20, 2023

ಪತಿಯಿಂದ ಪತ್ನಿಮೇಲೆ ಆಸಿಡ್ ದಾಳಿ

ಪತಿಯಿಂದ ಪತ್ನಿಮೇಲೆ ಆಸಿಡ್ ದಾಳಿ

    ಭದ್ರಾವತಿ, ಜ. ೨೦ : ಕುಡಿದು ಬಂದ ಗಂಡನೋರ್ವ ಹೆಂಡತಿ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ತಾಲೂಕಿನ ಭದ್ರಾ ರಿವರ್ ಪ್ರಾಜೆಕ್ಟ್(ಬಿಆರ್‌ಪಿ)ನಲ್ಲಿ ಗುರುವಾರ ನಡೆದಿದೆ.
    ಬಿಆರ್‌ಪಿ ನಿವಾಸಿ ರವಿ ಆಸಿಡ್ ದಾಳಿ ನಡೆಸಿದ್ದು, ಗಾಯಗೊಂಡಿರುವ ಪತ್ನಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ರವಿ ಇದೆ ಗ್ರಾಮದ ಯುವತಿಯನ್ನು ಸುಮಾರು ೧೨ ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.
    ಸುಮಾರು ೪-೫ ವರ್ಷಗಳಿಂದ ಗಂಡ-ಹೆಂಡತಿ ಇಬ್ಬರು ಜಗಳ ಮಾಡಿಕೊಂಡು ಬೇರೆ ಬೇರೆ ಇದ್ದು, ರವಿ ಬಿಆರ್‌ಪಿ ಬಿಟ್ಟು ತನ್ನ ಮಗನೊಂದಿಗೆ ತುಮಕೂರಿನಲ್ಲಿ ವಾಸಿಸುತ್ತಿದ್ದನು. ಈ ನಡುವೆ ಈತನ ಪತ್ನಿ ಸಹ ತನ್ನ ಇಬ್ಬರು  ಹೆಣ್ಣು ಮಕ್ಕಳನ್ನು ಬಿಆರ್‌ಪಿ ಶಾಂತಿನಗರದಲ್ಲಿರುವ ತನ್ನ ತಾಯಿ ಮನೆಯಲ್ಲಿ ಬಿಟ್ಟು ಜೀವನೋಪಾಯಕ್ಕಾಗಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಸೇರಿಕೊಂಡಿದ್ದು, ಮಕ್ಕಳನ್ನು ನೋಡಿಕೊಂಡು ಹೋಗಲು ಆಗಾಗ ಪತ್ನಿ ತನ್ನ ತಾಯಿ ಮನೆಗೆ ಬಂದು ಹೋಗುತ್ತಿದ್ದಳು.  
    ಕಳೆದ ೨ ದಿನಗಳ ಹಿಂದೆ ತನ್ನ ಮಗನೊಂದಿಗೆ ಬಿಆರ್‌ಪಿಗೆ ಬಂದಿದ್ದ ರವಿ ಪತ್ನಿಯ ತವರು ಮನೆಗೆ ಹೋಗಿದ್ದು, ಈ ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿ ಜಗಳನಡೆಸಿ ಆಸಿಡ್ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಗಾಯಗೊಂಡಿರುವ ಪತ್ನಿಯನ್ನು ತಕ್ಷಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗೌರಿ ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರವಿ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

No comments:

Post a Comment