Saturday, January 21, 2023

ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಲ್ಲಿ ಐತಿಹಾಸಿಕ ಸಾಧನೆ : ಆರ್. ವೇಣುಗೋಪಾಲ್

ಆರ್. ವೇಣುಗೋಪಾಲ್ 
    ಭದ್ರಾವತಿ, ಜ. ೨೧:   ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಳೆದ ೬೫ ವರ್ಷಗಳಿಂದ ಹಿಂದುಳಿದ ವರ್ಗ ಹಾಗೂ ದಲಿತ ವರ್ಗದವರ ಸಹಕಾರದಿಂದ ಪ್ರಬಲ ಮೂರು ಕೋಮಿನವರು ಶಾಸಕರಾಗಿ ಆಯ್ಕೆಯಾಗುತ್ತಾ ಬರುತ್ತಿದ್ದು,  ವಿಧಾನಸಭಾ ಕ್ಷೇತ್ರದ ಶೇಕಡ ೭೫ಕ್ಕೂ ಅಧಿಕ ಪ್ರಜ್ಞಾವಂತ ಮತದಾರರು ಈ ಬಾರಿ ನಡೆಯಲಿರುವ  ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ  ಯಾವುದೇ ಅಮಿಷಕ್ಕೆ ಒಳಗಾಗದೆ ಅಬ್ಬರದ ಪ್ರಚಾರ, ಭಾಷಣಕ್ಕೆ ಮನ್ನಣೆ ನೀಡದೇ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾಳಜಿ ಇರುವ ಇತರೆ ಜನಾಂಗದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡಲು ತೀರ್ಮಾನಿಸಿರುವುದು ತಿಳಿದು ಬಂದಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಯಾಗಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮನವಿ ಮಾಡಿದ್ದಾರೆ.
    ಅವರು  ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ, ಮುಂಬರುವ ೨೦೨೩ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ  ದಲಿತ ವರ್ಗದ ಅಭ್ಯರ್ಥಿ ಗೆಲ್ಲಬೇಕೆಂಬುದು ನನ್ನ ಅಭಿಲಾಷೆಯಾಗಿದ್ದು, ಈ ಹಿನ್ನೆಲೆಯಿಂದ ಹಿಂದುಳಿದ ವಿಶ್ವಕರ್ಮ ಜನಾಂಗಕ್ಕೆ ಸೇರಿದ ನನಗೆ ಅವಕಾಶ ನೀಡಬೇಕೆಂದರು.
  ಸುಮಾರು ೨ ಲಕ್ಷಕ್ಕೂ ಅಧಿಕ ಮತದಾರರಿದ್ದು, ಇದರಲ್ಲಿ ಸುಮಾರು ಒಂದು ಲಕ್ಷದ ಐವತ್ತು ಸಾವಿರಕ್ಕೂ ಅಧಿಕ ಹಿಂದುಳಿದ ವರ್ಗ, ದಲಿತ, ಅಲ್ಪಸಂಖ್ಯಾತ ಮತದಾರರು ಒಳಗೊಂಡಿದ್ದಾರೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ  ಸುಮಾರು ೪೫ ವರ್ಷಗಳಿಂದ ನಾನು ಎಲೆಮರೆಯ ಕಾಯಿಯಂತೆ  ಶ್ರಮಿಸುತ್ತಿದ್ದು,  ನನ್ನನ್ನು ಬೆಂಬಲಿಸುವ ವಿಶ್ವಾಸ ಹೊಂದಿದ್ದೇನೆ ಎಂದರು.
    ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ನನಗೆ  ಲಕ್ಷಾಂತರ ಜನರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿರುವ ಹೆಮ್ಮೆ ಇದೆ. ನಗರಸಭೆಯಲ್ಲಿ ೨ ಬಾರಿ ಪಕ್ಷೇತರ  ಸದಸ್ಯನಾಗಿ, ಒಂದು ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ, ಒಮ್ಮೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅಲ್ಲದೆ ವಿವಿಧ ಸಂಘಸಂಸ್ಥೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಶಿವಮೊಗ್ಗ ಜಿಲ್ಲಾ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಹಾಗೂ ಎರಡು ಬಾರಿ ಉಪಚುನಾವಣೆಯಲ್ಲಿ ಬಿ.ಜೆ.ಪಿ ಪರವಾಗಿ ಶಕ್ತಿ ಮೀರಿ ಶ್ರಮಿಸಿರುತ್ತೇನೆ. ಪದವೀದರ ಹಾಗೂ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ನಡೆದ ವಿಧಾನಪರಿಷತ್ ಶಾಸಕರ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಹಾಗೂ ಡಿ.ಎಸ್ ಅರುಣ್ ರವರ ಪರವಾಗಿ ಕೆಲಸ ಮಾಡಿರುತ್ತೇನೆ. ಈ ಹಿನ್ನಲೆಯಲ್ಲಿ ನನಗೆ ಸ್ಪರ್ಧಿಸಲು ಅವಕಾಶ ನೀಡಿದ್ದಲ್ಲಿ ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡುವ ವಿಶ್ವಾಸವಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಯೂನಸ್ ಬೇಗ, ಮಜರ್ ಉಲ್ಲಾ, ಎಸ್.ಎ ಜೇವಿಯರ್, ಪ್ರಸನ್ನ ಹಾಗು ಮಹಬೂಬ್ ಬಾಷ ಉಪಸ್ಥಿತರಿದ್ದರು.

No comments:

Post a Comment