Wednesday, January 18, 2023

ಜಗಳ ಬಿಡಿಸಲು ಹೋದವನ ಮೇಲೆ ಮಾರಣಾಂತಿಕ ಹಲ್ಲೆ : ಆರೋಪಿಗೆ ೪ ವರ್ಷ ಸಾದಾ ಕಾರಾವಾಸ ಶಿಕ್ಷೆ

ಶಿಕ್ಷೆಗೊಳಗಾದ ಮನುಸಿಂಗ್ ಅಲಿಯಾಸ್ ಮನು
    ಭದ್ರಾವತಿ, ಜ. ೧೮ : ಜಗಳ ಬಿಡಿಸಲು ಬಂದ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಯುವಕನಿಗೆ ೪ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ೪ ವರ್ಷ ಸಾದಾ ಕಾರಾವಾಸ ಮತ್ತು ೨೫ ಸಾವಿರ ರು.ದಂಡ, ಒಂದು ವೇಳೆ ದಂಡ ಕಟ್ಟಲು ವಿಫಲನಾದಲ್ಲಿ ೬ ತಿಂಗಳು ಕಾರಾವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
    ೨೪-೦೯-೨೦೧೮ ರಂದು ಮಧ್ಯಾಹ್ನ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೇಬಾಗಿ ಗ್ರಾಮದ ಚೇತನ್(೨೧) ಇವರ ದೊಡ್ಡಮ್ಮನೊಂದಿಗೆ ಶಿವರುದ್ರಪ್ಪ ಅಲಿಯಾಸ್ ಶಿವು ಎಂಬುವವನು ಹಳೆಯ ದ್ವೇಷದಿಂದ ಜಗಳ ಮಾಡುತ್ತಿದ್ದಾಗ ಬಿಡಿಸಲು ಹೋಗಿದ್ದು, ಈ ಸಂದರ್ಭದಲ್ಲಿ ಚೇತನ್ ಮೇಲೆ ಮನುಸಿಂಗ್ ಅಲಿಯಾಸ್ ಮನು(೨೦) ಎಂಬುವವನು ಮಚ್ಚಿನಿಂದ ತಲೆಗೆ ಮತ್ತು ಕೈಬೆರಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿತ್ತು.
    ಆಗಿನ ತನಿಖಾಧಿಕಾರಿಯಾಗಿದ್ದ ಡಿ.ಆರ್ ಭರತ್ ಕುಮಾರ್ ಪ್ರಕರಣದ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ  ಸರ್ಕಾರಿ ಅಭಿಯೋಜಕರಾದ ರತ್ನಮ್ಮ, ವಾದ ಮಂಡಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಧೀಶರಾದ ಆರ್.ವೈ ಶಶಿಧರ್ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.  

No comments:

Post a Comment