Tuesday, February 14, 2023

ವಿಐಎಸ್‌ಎಲ್ ಉಳಿಸಲು ಬೆಂಗಳೂರಿಗೆ ಯುವಕನ ಪಾದಯಾತ್ರೆ : ಪ್ರತಿಭಟನೆ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಬಿ.ಎಸ್ ದಯಾನಂದ್‌ರವರು ಭದ್ರಾವತಿಯಿಂದ ಬೆಂಗಳೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಮಂಗಳವಾರ ಬೆಂಗಳೂರಿನಲ್ಲಿ ಗುತ್ತಿಗೆ ಕಾರ್ಮಿಕರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
    ಭದ್ರಾವತಿ, ಫೆ. ೧೪ : ವಿಶ್ವೇಶ್ವರಾಯ ಉಕ್ಕಿನ ಮತ್ತು ಕಬ್ಬಿಣ ಕಾರ್ಖಾನೆ  ಮುಚ್ಚುವ ನಿರ್ಧಾರ ಕೈಬಿಟ್ಟು, ಪುನಶ್ಚೇತನಗೊಳಿಸಬೇಕೆಂದು ಒತ್ತಾಯಿಸಿ ನಗರದ ಯುವಕನೊಬ್ಬ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯೊಂದಿಗೆ ಪಾದಯಾತ್ರೆ ಮುಕ್ತಾಯಗೊಂಡಿದೆ.


    ನಗರದ ರೈಲ್ವೆ ನಿಲ್ದಾಣದ ಬಳಿ ಅಂಗಡಿ ಹೊಂದಿರುವ ಬಿ.ಎಸ್ ದಯಾನಂದ್ ಎಂಬ ಯುವಕ ಭದ್ರಾವತಿಗೆ ಬಂದು ನೆಲೆಸಿ ಕೇವಲ ೫-೬ ವರ್ಷಗಳಾಗಿವೆ. ಆದರೆ, ಉಕ್ಕಿನ ನಗರಿ ತನಗೆ ನೆಲೆಸಲು ಜಾಗ, ಅನ್ನ, ನೀರು ನೀಡಿ ಸಲುಹಿದೆ. ಇಂತಹ ನಗರ ಉಳಿಯಬೇಕು ಎಂದರೆ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆ ಉಳಿಯಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಮಂದಿಯ ಜೀವನಕ್ಕೆ ಆಧಾರವಾಗಿರುವ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವುದರಿಂದ ಎಷ್ಟೋ ಕುಟುಂಬಗಳ ಜೀವನ ನಾಶವಾಗಲಿದೆ. ಹೀಗಾಗಿ, ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು, ಅಗತ್ಯ ಬಂಡವಾಳ ತೊಡಗಿಸಿ ಗತವೈಭವ ಮರುಕಳಿಸುವಂತೆ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೊಂದಿಗೆ ದಯಾನಂದ್ ಪಾದಯಾತ್ರೆ ಆರಂಭಿಸಿದ್ದರು.
    ಮೂಲತಃ ಶ್ರವಣಬೆಳಗೊಳದವರಾದ ದಯಾನಂದ್ ಫೆ.೧ರಂದು ಪಾದಯಾತ್ರೆ ಆರಂಭಿಸಿ ಮೊದಲು ಜಿಲ್ಲಾಧಿಕಾರಿಗಳ ಕಛೇರಿವರೆಗೂ ತೆರೆಳಿ ಮನವಿ ಸಲ್ಲಿಸಿದ್ದರು. ನಂತರ ಫೆ.೭ರಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿ ೧೪ರ ಮಂಗಳವಾರ ತಲುಪಿದ್ದು, ಇವರಿಗೆ ಪ್ರೀಡಂ ಪಾರ್ಕಿನಲ್ಲಿ ಗುತ್ತಿಗೆ ಕಾರ್ಮಿಕರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ಕಾರ್ಖಾನೆಗೆ ಡಿಸಿ ಮತ್ತು ಎಸ್‌ಪಿ ಭೇಟಿ : ಪರಿಶೀಲನೆ
    ಕೇಂದ್ರ ಸಚಿವರು ಕಾರ್ಖಾನೆ ಮುಚ್ಚುವ ಕುರಿತು ಸ್ಪಷ್ಟಪಡಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಮಂಗಳವಾರ ಮಧ್ಯಾಹ್ನ ಏಕಾಏಕಿ ಕಾರ್ಖಾನೆಗೆ ಭೇಟಿ ನೀಡಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿವೆ.


    ಕಾರ್ಖಾನೆಯ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರ್ ಜೊತೆ ಮಾತುಕತೆ ನಡೆಸಿದ್ದು, ಕಾರ್ಖಾನೆ ಹೊಂದಿರುವ ಖಾಲಿ ಜಾಗ ಮತ್ತು ವಸತಿಗೃಹಗಳಿರುವ ಜಾಗದ ನಕಾಶೆ ಪರಿಶೀಲನೆ ನಡೆಸಲಾಯಿತು. ಅಲ್ಲದೆ ಕಾರ್ಖಾನೆ ಅಡಳಿತ ಮಂಡಳಿ ಜೊತೆ ಸಹ ಚರ್ಚೆ ನಡೆಸಲಾಗಿದೆ. ಗುತ್ತಿಗೆ ಕಾರ್ಮಿಕರು ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಿನ್ನಲೆಯಲ್ಲಿ ಕಾರ್ಖಾನೆ ಬಳಿ ಬಿಕೋ ಎನ್ನುವ ವಾತಾವರಣ ಕಂಡು ಬಂದಿತು.


ಕೇಂದ್ರ ಸಚಿವರು ಕಾರ್ಖಾನೆ ಮುಚ್ಚುವ ಕುರಿತು ಸ್ಪಷ್ಟಪಡಿಸಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಮಂಗಳವಾರ ಮಧ್ಯಾಹ್ನ ಏಕಾಏಕಿ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿವೆ.

No comments:

Post a Comment