Monday, February 13, 2023

ವಿಐಎಸ್‌ಎಲ್ ಉಳಿವಿಗಾಗಿ ಜೆಡಿಎಸ್ ಬೆಂಬಲಿಸಿ : ಶಾರದ ಅಪ್ಪಾಜಿ

ಸುಂಕದಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಹಿರಿಯ ನಾಗರೀಕರಿಗೆ ಸನ್ಮಾನ ಕಾರ್ಯಕ್ರಮ

ಭದ್ರಾವತಿ ನಗರಸಭೆ ವಾರ್ಡ್ ನಂ.೩೪ರ ಅಪ್ಪರ್ ಹುತ್ತಾದಲ್ಲಿ ಸುಂಕದಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಎಂ.ಜೆ ಅಪ್ಪಾಜಿ ಅಭಿಮಾನಿ ಬಳಗ ಮತ್ತು ಶಂಕರ್‌ನಾಗ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರೀಕರಿಗೆ ಸನ್ಮಾನ ಹಾಗು ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಫೆ. ೧೪: ಮಾಜಿ ಶಾಸಕರಾದ ಎಂ.ಜೆ ಅಪ್ಪಾಜಿಯವರು ಅಂದು ಎಂಪಿಎಂ ಕಾರ್ಮಿಕರ ಪರವಾಗಿ ಹಗಲಿರುಳು ಹೋರಾಟ ನಡೆಸಿದರು. ಆದರೂ ಆ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಸ್ಥಿತಿ ಎದುರಾಗಿದ್ದು, ಕಾರ್ಖಾನೆ ಉಳಿಸಿಕೊಳ್ಳಲು ರಾಜಕೀಯ ಅಧಿಕಾರ ಅಗತ್ಯವಾಗಿದೆ ಎಂದು ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಹೇಳಿದರು.
    ಅವರು ನಗರಸಭೆ ವಾರ್ಡ್ ನಂ.೩೪ರ ಅಪ್ಪರ್ ಹುತ್ತಾದಲ್ಲಿ ಸುಂಕದಮ್ಮ ಜಾತ್ರಾ ಮಹೋತ್ಸವ ಅಂಗವಾಗಿ ಎಂ.ಜೆ ಅಪ್ಪಾಜಿ ಅಭಿಮಾನಿ ಬಳಗ ಮತ್ತು ಶಂಕರ್‌ನಾಗ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರೀಕರಿಗೆ ಸನ್ಮಾನ ಹಾಗು ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಎಂ.ಜೆ ಅಪ್ಪಾಜಿಯವರು ಕಾರ್ಮಿಕರಾಗಿ, ಕ್ಷೇತ್ರದ ಶಾಸಕರಾಗಿ ಅವರು ನಡೆಸಿದ ಹೋರಾಟ ಇಂದಿಗೂ ನಮ್ಮೆಲ್ಲರ ಕಣ್ಮುಂದೆ ಇದೆ. ಕ್ಷೇತ್ರ ಎರಡು ಕಣ್ಣುಗಳಲ್ಲಿ ಒಂದಾದ ಎಂಪಿಎ ಕಾರ್ಖಾನೆ ಈಗಾಗಲೇ ಮುಚ್ಚಿಹೋಗಿದ್ದು, ಕಾರ್ಮಿಕರು ಹಾಗು ಕುಟುಂಬ ವರ್ಗದವರು ಇಂದು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಸ್ಥಿತಿ ಎದುರಾಗಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಎದುರಿಸಬೇಕಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಮಾತ್ರ ಈ ಕಾರ್ಖಾನೆ ಉಳಿಸಿಕೊಳ್ಳಲು ಸಾಧ್ಯ. ಕ್ಷೇತ್ರದ ಮತದಾರರು ಜೆಡಿಎಸ್ ಬೆಂಬಲಿಸುವ ಮೂಲಕ ಅವರನ್ನು ಪುನಃ ಮುಖ್ಯಮಂತ್ರಿಯನ್ನಾಗಿಸಬೇಕೆಂದು ಮನವಿ ಮಾಡಿದರು.


    ನಗರಸಭೆ ಮಾಜಿ ಸದಸ್ಯ ಎಚ್.ಬಿ ರವಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದಲ್ಲಿ ಎಂ.ಜೆ ಅಪ್ಪಾಜಿಯವರಾಗಲಿ, ನಾನಗಲಿ ರಾಜಕೀಯವನ್ನು ವೈಯಕ್ತಿಕವಾಗಿ ಬಳಸಿಕೊಂಡಿಲ್ಲ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಂದಿಗೂ ಉಳಿದುಕೊಂಡಿವೆ. ಮುಂದಿನ ದಿನಗಳಲ್ಲೂ ಸಹ ನಾವು ಅಪ್ಪಾಜಿ ಕುಟುಂಬವನ್ನು ಬೆಂಬಲಿಸುವುದು ಸೂಕ್ತವಾಗಿದೆ. ಅವರ ಕುಟುಂಬದ ಜೊತೆ ನಾನು ಸದಾ ಕಾಲ ಇರುತ್ತೇನೆ ಎಂದರು.
    ವೇದಿಕೆಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಮಾಜಿ ನಗರಸಭಾ ಸದಸ್ಯರಾದ ಕರಿಯಪ್ಪ, ಮುರ್ತುಜಾಖಾನ್, ವಿಶಾಲಾಕ್ಷಿ, ಎಸ್.ಬಿ ಮೋಹನ್ ರಾವ್, ನಗರಸಭಾ ಸದಸ್ಯರಾದ ಪಲ್ಲವಿ, ಜಯಶೀಲ, ನಾಗರತ್ನ, ಸವಿತಾ, ರೂಪಾವತಿ, ಬಸವರಾಜ ಬಿ. ಆನೇಕೊಪ್ಪ, ಕೋಟೇಶ್ವರ ರಾವ್, ಉದಯಕುಮಾರ್, ಮುಖಂಡರಾದ ಡಿ.ಟಿ ಶ್ರೀಧರ್, ಗೊಂದಿ ಜಯರಾಂ, ವಸಂತ್, ಭಾಗ್ಯಮ್ಮ, ಉಮೇಶ್, ಮಧುಸೂಧನ್, ಸಣ್ಣಯ್ಯ, ಮಲ್ಲೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಎಂ.ಜೆ ಅಪ್ಪಾಜಿ ಅಭಿಮಾನಿ ಬಳಗ ಮತ್ತು ಶಂಕರ್‌ನಾಗ್ ಅಭಿಮಾನಿ ಬಳಗದ ವತಿಯಿಂದ ಶಾರದ ಅಪ್ಪಾಜಿ, ವಾರ್ಡಿನ ಹಿರಿಯ ನಾಗರೀಕರು, ಮಹಿಳಾ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಆರ್ಕೆಸ್ಟ್ರಾ ಕಲಾವಿದರಿಂದ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ನಡೆಯಿತು.

No comments:

Post a Comment