Monday, February 13, 2023

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ೨೬ನೇ ದಿನ ಹೋರಾಟ : ಕಾರ್ಖಾನೆಯನ್ನು ರಾಜ್ಯ ಸರ್ಕಾರ ಹಿಂಪಡೆಯಲಿ

ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೨೬ನೇ ದಿನ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ.ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಫೆ. ೧೩ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ರಾಜ್ಯ ಸರ್ಕಾರ ಹಿಂಪಡೆದು ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಿ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ.ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ೨೬ನೇ ದಿನ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರಮುಖರು, ಕಾರ್ಖಾನೆಯಲ್ಲಿ ಉತ್ಪಾದನೆ ಪ್ರಾರಂಭ ಮಾಡಿ ೧೦೦ ವರ್ಷ ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಉಕ್ಕು ಪ್ರಾಧಿಕಾರ ಮುಚ್ಚಲು ಹೊರಟಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದರು.
ಮೈಸೂರು ಸಂಸ್ಥಾನದ ಅಂದಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಅವರ ತಾಯಿ ಕೆಂಪನಂಜಮ್ಮಣಿ ದೇವಿ ಅವರಿಂದ ರು. ೧೦,೦೦೦ ಪಡೆದು  ಈ ಕಾರ್ಖಾನೆಯನ್ನು ನಿರ್ಮಿಸಿದರು. ಒಂದು ವೇಳೆ ಈ ಕಾರ್ಖಾನೆ ಮುಚ್ಚಿದರೆ ಇದರ ಸ್ಥಾಪನೆಗೆ ಕಾರಣಕರ್ತರಾಗಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗು ಸರ್.ಎಂ. ವಿಶ್ವೇಶ್ವರಾಯ ಅವರ ಹೆಸರಿಗೆ ಮಸಿ ಬಳಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಯಲ್ಲಿ ಸುಮಾರು ೧೪೦೦ ಗುತ್ತಿಗೆ ಕಾರ್ಮಿಕರು, ೨೧೧ ಕಾಯಂ ಕಾರ್ಮಿಕರು ಹಾಗೂ ೬೦ ಅಧಿಕಾರಿಗಳು ಹಾಗೂ ಇವರಿಗೆ ಅವಲಂಬಿತರಾಗಿರುವ ಪ್ರತ್ಯಕ್ಷವಾಗಿ ಸುಮಾರು ೮೦೦೦ ಜನ ಹಾಗೂ ಪರೋಕ್ಷವಾಗಿ ಅವಲಂಬಿತರಾಗಿರುವ  ಸುಮಾರು ೪೦,೦೦೦ ಜನ ಬೀದಿಗೆ ಬಿದ್ದು ಇಡೀ ಭದ್ರಾವತಿಯಲ್ಲಿ ಸ್ಮಶಾನ ಮೌನ ಆವರಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ಉಕ್ಕು ಪ್ರಾಧಿಕಾರಕ್ಕೆ ಒಳಪಟ್ಟ ಚಂದ್ರಾಪುರದಲ್ಲಿರುವ ಮಹಾರಾಷ್ಟ್ರ ಎಲೆಕ್ಟ್ರೋ ಸ್ಮೆಲ್ಟ್ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಾಗ ಮಹಾರಾಷ್ಟ್ರ ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು, ವಿಧಾನಸಭೆ ಹಾಗು ವಿಧಾನಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಹಾಗೂ ಸಂಘ ಸಂಸ್ಥೆಯವರು ಪಕ್ಷಾತೀತವಾಗಿ ಉಗ್ರವಾದ ಹೋರಾಟ ಹಾಗೂ ಮಹಾರಾಷ್ಟ್ರ ರಾಜ್ಯ ಬಂದ್ ಮಾಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದು ಉಕ್ಕು ಪ್ರಾಧಿಕಾರದಿಂದ ಕಾರ್ಖಾನೆಯನ್ನು ಹಿಂಪಡೆದು ಪ್ರಸ್ತುತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದು, ಈ ವಿಚಾರವನ್ನು ರಾಜ್ಯದ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಮಂಡಿಸಿ ಸುಧೀರ್ಘವಾಗಿ ಚರ್ಚಿಸಿ  ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡುವಂತೆ ಒತ್ತಾಯಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ "ಸರ್ವರಿಗೂ ಸೂರು" ಯೋಜನೆ ಜಾರಿ ಮಾಡಲು ಸರ್ಕಾರಿ ನೌಕರರಿಗೆ ಬಾಡಿಗೆ ಆಧಾರದ ಮೇಲೆ ಹಾಗೂ ನಿವೃತ್ತ ಕಾರ್ಮಿಕರಿಗೆ ಗುತ್ತಿಗೆ ಆಧಾರದ ಮೇಲೆ ನೀಡಿರುವ ಮನೆಗಳನ್ನು ಹಾಗೂ ಪಾಳು ಬಿದ್ದಿರುವ ಮನೆಗಳನ್ನು ದುರಸ್ತಿಗೊಳಿಸಿ ಕಾರ್ಖಾನೆಯ ಆಧಾರಸ್ತಂಭಗಳಾಗಿರುವ ಗುತ್ತಿಗೆ ಕಾರ್ಮಿಕರಿಗೂ ಮಾರಾಟ ಮಾಡಿದ್ದಲ್ಲಿ, ಅವರವರ ಹೆಸರಿಗೆ ದಾಖಲಿಸಿಕೊಟ್ಟರೆ ಇದರಿಂದ ಬರುವ ಆದಾಯವನ್ನು ಕಾರ್ಖಾನೆಯ ಬಂಡವಾಳಕ್ಕೆ ಉಪಯೋಗಿಸಬಹುದು.
ಕಾರ್ಖಾನೆಯ ಆಡಳಿತ ವ್ಯಾಪ್ತಿಯ ಪ್ರದೇಶಗಳಲ್ಲಿ ಸಾವಿರಾರು ಎಕರೆ ಖಾಲಿ ಭೂಮಿ ಹೊಂದಿದ್ದು, ಇದರಲ್ಲಿ ಬಹಳಷ್ಟು ಒತ್ತುವರಿಯಾಗಿದ್ದು, ಇವುಗಳನ್ನು ತೆರವುಗೊಳಿಸಿ ಮಾರಾಟ ಮಾಡುವುದರಿಂದ ಹಾಗೂ ಉಳಿದ ಭೂಮಿಯಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಬಡಾವಣೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿದರೆ ಸಾವಿರಾರು ಕೋಟಿ ರೂಗಳ ಆಧಾಯ ಬರುತ್ತದೆ. ಈ ಹಣವನ್ನು ಸಹ ಕಾರ್ಖಾನೆಗೆ ಬಂಡವಾಳವನ್ನಾಗಿ ಉಪಯೋಗಿಸಿಕೊಳ್ಳಬಹುದಾಗಿದೆ ಎಂದು ಸಲಹೆ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರದಿಂದ ಹಿಂಪಡೆದು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿದರೆ ಕಾರ್ಖಾನೆಯನ್ನು ಲಾಭದಾಯಕವಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯ. ಈ ಮೂಲಕ ಕಾರ್ಖಾನೆ, ಕಾರ್ಮಿಕರು ಹಾಗು ಭದ್ರಾವತಿ ಉಳಿಸುವಂತೆ ಕೋರಿದರು.  
ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್. ವೇಣುಗೋಪಾಲ್, ಸುವರ್ಣ ಮಹಿಳಾ ವೇದಿಕೆ ಅಧ್ಯಕ್ಷೆ ರಮಾವೆಂಕಟೇಶ್, ಗೀತಾ ರವಿಕುಮಾರ್, ಎಂ.ಆರ್ ಸುಜಾತ, ಎಂ. ರಾಧ, ಇಂದಿರಾಣಿ,  ಮುರುಗನ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್. ರಮೇಶ್, ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ, ಗುತ್ತಿಗೆ ಕಾರ್ಮಿಕರ ಸಂಘದ ಪ್ರಮುಖರಾದ ಪಿ. ರಾಕೇಶ್, ಕುಮಾರಸ್ವಾಮಿ, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment