Saturday, February 25, 2023

ಫೆ.೨೭ರಂದು ಗುತ್ತಿಗೆ ಕಾರ್ಮಿಕರ ಸಂಘದಿಂದ ಬೈಕ್ ರ್‍ಯಾಲಿ : ಪ್ರಧಾನಿಗೆ ಮನವಿ


ಭದ್ರಾವತಿ  ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಫೆ.೨೭ರಂದು ಮನವಿ ಸಲ್ಲಿಸುವುದಾಗಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 
ಭದ್ರಾವತಿ, ಫೆ. ೨೫ : ನಗರದ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಫೆ.೨೭ರಂದು ಮನವಿ ಸಲ್ಲಿಸುವುದಾಗಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್ ಹೇಳಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವುದು, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಈಗಾಗಲೇ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಮೋದಿಯವರಿಗೆ ಖುದ್ದಾಗಿ ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಕೋರಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, ಅಲ್ಲಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು. 
ಫೆ.೨೭ರಂದು ಬೆಳಿಗ್ಗೆ ೭ ಗಂಟೆಗೆ ಕಾರ್ಖಾನೆ ಮುಂಭಾಗದಿಂದ ಬೈಕ್ ರ್‍ಯಾಲಿ ನಡೆಸಲಿದ್ದು, ನಂತರ ವಿಮಾನ ನಿಲ್ದಾಣ ತಲುಪಿ ಮನವಿ ಸಲ್ಲಿಸಲಾಗುವುದು. ಈ ಹಿನ್ನಲೆಯಲ್ಲಿ ಕ್ಷೇತ್ರದ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಸೇರಿದಂತೆ ಸಮಸ್ತ ನಾಗರೀಕರು ಪಕ್ಷಾತೀತವಾಗಿ ಬೆಂಬಲಿಸಿ ಪಾಲ್ಗೊಳ್ಳುವಂತೆ ಕೋರಿದರು.
ಫೆ.೨೪ರಂದು ಕರೆ ನೀಡಲಾಗಿದ್ದ ಭದ್ರಾವತಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರ ಸಂಘಟನೆಗಳು ಕೃತಜ್ಞತೆ ಸಲ್ಲಿಸಲಿವೆ ಎಂದರು.  
ಉಪಾಧ್ಯಕ್ಷ ಎಸ್. ವಿನೋದ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ. ರಾಕೇಶ್, ಕಾರ್ಯದರ್ಶಿ ಅಂತೋಣಿದಾಸ್, ಖಜಾಂಚಿ ಜಿ. ಆನಂದ್, ಆರ್. ಅರುಣ್‌ಕುಮಾರ್, ಜೆ. ಕಿರಣ್, ಎಐಟಿಯುಸಿ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ಧನಂಜಯ, ಕಾರ್ಯದರ್ಶಿ ಐಸಾಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment