Saturday, April 15, 2023

ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಿಂದ ಮೊದಲ ನಾಮಪತ್ರ

ಮಹಿಳಾ ಅಭ್ಯರ್ಥಿ ಸುಮಿತ್ರ ಬಾಯಿ ಸ್ಪರ್ಧೆ  

ಭದ್ರಾವತಿಯಲ್ಲಿ ರವಿ ಕೃಷ್ಣಾರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ಅಧಿಕೃತ ಅಭ್ಯರ್ಥಿ ಸುಮಿತ್ರ ಬಾಯಿ ಈ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಶನಿವಾರ ನಾಮಪತ್ರ ಸಲ್ಲಿಸಿದರು.
    ಭದ್ರಾವತಿ, ಏ. ೧೫ : ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ೨ನೇ ದಿನವಾದ ಶನಿವಾರ ಒಂದೇ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದೆ.
    ರವಿ ಕೃಷ್ಣಾರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ಅಧಿಕೃತ ಅಭ್ಯರ್ಥಿ ಸುಮಿತ್ರ ಬಾಯಿ ಗುರುವಾರ ನಾಮಪತ್ರ ಸಲ್ಲಿಸಲು ವಿಳಂಬವಾದ ಹಿನ್ನಲೆಯಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದರು.  ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದರಲ್ಲೂ ವಿಶೇಷ ಎಂದರೆ ಮಹಿಳಾ ಅಭ್ಯರ್ಥಿಯಾಗಿರುವುದು.
ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ ನಾಮಪತ್ರ ಸ್ವೀಕರಿಸಿದರು. ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುರೇಶ ಆಚಾರ್ ಉಪಸ್ಥಿತರಿದ್ದರು.
    ಸುಮಿತ್ರ ಬಾಯಿ ನಾಮಪತ್ರ  ಸಲ್ಲಿಸುವ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜ್‌ರಾವ್ ಸಿಂಧೆ, ಯುವ ಘಟಕದ ಅಧ್ಯಕ್ಷ ಅರಳಿಹಳ್ಳಿ ತ್ಯಾಗರಾಜ್, ಉಪಾಧ್ಯಕ್ಷ ಆನಂದ್ ಛಲಪತಿ, ಯುವ ಘಟಕದ ಸಂಘಟನಾ ಕಾರ್ಯದರ್ಶಿ ರಾಜೇಂದ್ರ, ಉಪಾಧ್ಯಕ್ಷ ವಿನೋದ್, ಮಲ್ಲಿಕಾರ್ಜುನ್, ಸುರೇಶ್, ಸಂತೋಷ್, ಮಹೇಶ್, ಚಂದನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸುಮಿತ್ರ ಬಾಯಿ ಬಳಿ ೨ ಎಕರೆ, ೩೯ ಗುಂಟೆ ತೋಟ :
    ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸುಮಾರು ೫೫ ವರ್ಷ ವಯಸ್ಸಿನ ಸುಮಿತ್ರ ಬಾಯಿ ಉಜ್ಜನಿಪುರ ನಿವಾಸಿಯಾಗಿದ್ದು, ಎಂಪಿಎಂ ಕಾರ್ಖಾನೆ ನಿವೃತ್ತ ಉದ್ಯೋಗಿ ನಾಗರಾಜ್‌ರಾವ್ ಸಿಂಧೆಯವರ ಪತ್ನಿಯಾಗಿದ್ದಾರೆ.  
    ಇವರ ಬಳಿ ೨ ಎಕರೆ ೩೯ ಗುಂಟೆ ತೋಟವಿದ್ದು, ಒಟ್ಟು ಸುಮಾರು ೬೦ ಗ್ರಾಂ. ಚಿನ್ನಾಭರಣಗಳನ್ನು ಹೊಂದಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರ  ಇದ್ದು, ೪ನೇ ತರಗತಿ ವ್ಯಾಸಂಗ ಮಾಡಿದ್ದಾರೆ. ಉಳಿದಂತೆ ಇವರ ಪತಿ ನಾಗರಾಜ್‌ರಾವ್ ಸಿಂಧೆ ಅವರ ಹೆಸರಿನಲ್ಲಿ ಬ್ಯಾಂಕಿನಲ್ಲಿ ೧೫ ಲಕ್ಷ ರೂ. ಠೇವಣಿ ಹಣ ಇದ್ದು, ಇದರ ಜೊತೆಗೆ ಬ್ಯಾಂಕ್ ಖಾತೆಯಲ್ಲಿ ಹೆಚ್ಚುವರಿಯಾಗಿ ೩ ಲಕ್ಷ ರು. ಇದೆ.
    ಏ.೧೮ರಂದು ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ :
    ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಮತ್ತು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್‌ರವರು ಏ.೧೮ರ ಮಂಗಳವಾರ ನಾಮಪತ್ರ ಸಲ್ಲಿಸುತ್ತಿದ್ದಾರೆ.
    ಅಂದು ನಾಮಪತ್ರ ಸಲ್ಲಿಕೆಗೆ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಶಾರದ ಅಪ್ಪಾಜಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪತ್ನಿಯಾಗಿದ್ದಾರೆ. ಪ್ರಮುಖ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಮಂಗೋಟೆ ರುದ್ರೇಶ್ ಸಮಾಜವಾದಿ ನಾಯಕ, ನ್ಯಾಯವಾದಿ ದಿವಂಗತ ಮಂಗೋಟೆ ಮುರಿಗೆಪ್ಪನವರ ಪುತ್ರರಾಗಿದ್ದಾರೆ. ಪ್ರಮುಖ ಸಾಧು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ.

No comments:

Post a Comment