Tuesday, May 30, 2023

ಮೇ.೩೧ರಂದು ಶಾಲಾ ಹಬ್ಬದೊಂದಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ

ಪೋಷಕರು ಸ್ವಯಂ ಪ್ರೇರಣೆಯಿಂದ ಮುಂದೆ ಬರಲಿ

ಭದ್ರಾವತಿ ನಗರಸಭೆ ವಾಪ್ತಿಯ ಹೃದಯ ಭಾಗದ ಜಟ್‌ಪಟ್ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಕಾಂಪೌಂಡ್ ಇಲ್ಲದೆ ಇರುವುದು.
    ಭದ್ರಾವತಿ, ಮೇ. ೩೦ : ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಮೇ.೩೧ರಿಂದ ಶಾಲಾಹಬ್ಬದೊಂದಿಗೆ ಚಾಲನೆ ನೀಡಲಾಗುತ್ತಿದ್ದು, ಕ್ಷೇತ್ರ ಶಿಕ್ಷಣ ಇಲಾಖೆ ಈಗಾಗಲೇ ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಂಡಿದೆ.
    ಆದರೆ ಕೆಲವು ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳು ಸಮರ್ಪಕವಾಗಿಲ್ಲದಿರುವುದು ಕಂಡು ಬರುತ್ತಿದೆ. ಶಾಲಾ ಹಬ್ಬದ ಹಿಂದಿನ ೨ ದಿನ ಶಾಲಾ ಕೊಠಡಿ ಹಾಗು ಆವರಣದಲ್ಲಿ ಸ್ವಚ್ಛತೆಗೆ ಗಮನ ನೀಡುವಂತೆ ಹಾಗು ಶಾಲಾ ವ್ಯಾಪ್ತಿಯಲ್ಲಿ ವಿಶೇಷ ದಾಖಲಾತಿ ಹಾಗು ಸಾಮಾನ್ಯ ದಾಖಲಾತಿ ಅಂದೋಲನ ಕೈಗೊಳ್ಳುವಂತೆ ಸಂಬಂಧಪಟ್ಟ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಹಾಗು ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಸೂಚಿಸಲಾಗಿತ್ತು. ಆದರೆ ಕೆಲವು ಶಾಲೆಗಳಲ್ಲಿ ಕೊಠಡಿ ಹಾಗು ಆವರಣದಲ್ಲಿ ಸ್ವಚ್ಛತೆ ಇನ್ನೂ ಸಮರ್ಪಕವಾಗಿ ಕೈಗೊಂಡಿಲ್ಲ.
    ಕೆಲವು ಸರ್ಕಾರಿ ಶಾಲೆಗಳಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ. ಮುಖ್ಯವಾಗಿ ಶಾಲೆಯ ಆವರಣಕ್ಕೆ ಕಾಂಪೌಂಡ್ ಇಲ್ಲದೆ ಇರುವುದು ಕಂಡು ಬರುತ್ತಿದ್ದು, ಇದರಿಂದಾಗಿ ಈ ಶಾಲೆಗಳ ಬಳಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅಲ್ಲದೆ ಪುಂಡ ಪೋಕರಿಗಳ, ಹಾವು, ಮುಂಗುಸಿ, ಬೀದಿ ನಾಯಿಗಳ, ದನ ಕರುಗಳ ತಾಣಗಳಾಗಿ ಮಾರ್ಪಟ್ಟಿವೆ. ಈ ಹಿಂದೆ ಸಂಬಂಧಪಟ್ಟ ಶಿಕ್ಷಣ ಸಚಿವರಿಗೆ ಈ ಸಂಬಂಧ ದೂರು ಸಲ್ಲಿಸಿ ತಕ್ಷಣ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಸಹ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
    ಕೆಲವು ಸರ್ಕಾರಿ ಶಾಲೆಗಳ ಬಳಿ ವಿಶೇಷ ದಾಖಲಾತಿ ಹಾಗೂ ಸಾಮಾನ್ಯ ದಾಖಲಾತಿ ಕುರಿತು ಹಾಗು ಶಾಲೆಯಲ್ಲಿ ಸರ್ಕಾರದ ಪೋತ್ಸಾಹದಾಯಕ ಯೋಜನೆಗಳು, ವಿಶೇಷ ಸೌಲಭ್ಯಗಳು ಹಾಗು ಶಾಲೆಯಲ್ಲಿ ಲಭ್ಯವಿರುವ ಇತರೆ ಸೌಲಭ್ಯಗಳ ಕುರಿತು ಪ್ಲೆಕ್ಸ್‌ಗಳನ್ನು ಹಾಕಲಾಗಿದೆ.
    ತಾಲೂಕಿನಲ್ಲಿ ಕೆಲವು ಸರ್ಕಾರಿ ಶಾಲೆಗಳು ಶಾಲಾಭಿವೃದ್ಧಿ ಸಮಿತಿ, ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು ಹಾಗು ಸ್ಥಳೀಯರ ಸಹಕಾರದೊಂದಿಗೆ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿ ಮಕ್ಕಳನ್ನು ಶಾಲೆಗಳ ಕಡೆಗೆ ಆಕರ್ಷಿಸುತ್ತಿವೆ. ಅಲ್ಲದೆ ಉತ್ತಮ ಫಲಿತಾಂಶ ಸಹ ಪಡೆದುಕೊಳ್ಳುತ್ತಿವೆ.
    ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕಾಗಿದೆ. ಆಗ ಮಾತ್ರ ಸರ್ಕಾರಿ ಶಾಲೆಗಳು ಸಹ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯ.


ಭದ್ರಾವತಿ ತಾಲೂಕು ಕಛೇರಿ ರಸ್ತೆಯ ಎ.ಕೆ ಕಾಲೋನಿ, ಹನುಮಂತ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ವಿಶೇಷ ದಾಖಲಾತಿ, ಸಾಮಾನ್ಯ ದಾಖಲಾತಿ ಹಾಗು ಸೌಲಭ್ಯಗಳ ಕುರಿತ ಮಾಹಿತಿಗಳನ್ನೊಳಗೊಂಡ ಪ್ಲೆಕ್ಸ್ ಹಾಕಿರುವುದು.

No comments:

Post a Comment