ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳವಾರ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತಯಂತ್ರಗಳೊಂದಿಗೆ ನಿಯೋಜನೆಗೊಂಡ ಸ್ಥಳಕ್ಕೆ ಬಸ್‌ಗಳ ಮೂಲಕ ತೆರಳಿದರು.
ಭದ್ರಾವತಿ, ಮೇ. ೯ : ವಿಧಾನಸಭಾ ಚುನಾವಣೆ ಮತದಾನಕ್ಕೆ ಕ್ಷೇತ್ರದಲ್ಲಿ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಮಂಗಳವಾರ ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿಗಳು ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರದಿಂದ ಮತಯಂತ್ರಗಳೊಂದಿಗೆ ತೆರಳಿದರು. ಈ ಬಾರಿ ಕ್ಷೇತ್ರದಲ್ಲಿ ಒಟ್ಟು ೨,೧೨,೧೬೫ ಮಂದಿ ಮತದಾನದ ಹಕ್ಕು ಹೊಂದಿದ್ದು, ಈ ಹಿಂದೆ ಜನವರಿ ತಿಂಗಳಿನಲ್ಲಿ ಒಟ್ಟು ೨,೦೭,೬೦೯ ಅಂತಿಮ ಮತದಾರರನ್ನು ಘೋಷಿಸಲಾಗಿತ್ತು. ೪ ತಿಂಗಳಿನಲ್ಲಿ ಪುನಃ ೪,೫೫೬ ಹೊಸ ಮತದಾರರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.
ಒಟ್ಟು ೨೫೩ ಮತಗಟ್ಟೆಗಳಿದ್ದು, ಈ ಪೈಕಿ ಸಂಪೂರ್ಣವಾಗಿ ಮಹಿಳೆಯರಿಂದ ನಿರ್ವಹಿಸಲ್ಪಡುವ ೨ ಸಖಿ(ಪಿಂಕ್) ಮತಗಟ್ಟೆಗಳು ಸೇರ್ಪಡೆಗೊಂಡಿವೆ. ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ತೆರಳಲು ಒಟ್ಟು ೪೦ ಬಸ್‌ಗಳನ್ನು ನಿಯೋಜನೆಗೊಳಿಸಲಾಗಿದೆ. ಮಂಗಳವಾರ ಬೆಳಿಗ್ಗೆಯೇ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯ ಹಾಜರಾಗಿ ಮಧ್ಯಾಹ್ನ ಊಟದ ನಂತರ ನಿಯೋಜನೆಗೊಂಡ ಮತಗಟ್ಟೆಗಳಿಗೆ ಮತಯಂತ್ರಗಳೊಂದಿಗೆ ತೆರಳಿದರು.
ಶಾಸಕ ಬಿ.ಕೆ ಸಂಗಮೇಶ್ವರ್(ಕಾಂಗ್ರೆಸ್), ಶಾರದ ಅಪ್ಪಾಜಿ(ಜೆಡಿಎಸ್), ಮಂಗೋಟೆ ರುದ್ರೇಶ್(ಬಿಜೆಪಿ), ಆನಂದ್(ಎಎಪಿ), ಸುಮಿತ್ರಾ ಬಾಯಿ (ಕೆಆರ್‌ಎಸ್), ಶಶಿಕುಮಾರ್ ಎಸ್. ಗೌಡ(ಜೆಡಿಯು), ಇ.ಪಿ ಬಸವರಾಜ(ಆರ್‌ಪಿಐಕೆ), ಬಿ.ಎನ್ ರಾಜು(ಪಕ್ಷೇತರ), ಅಹಮದ್ ಅಲಿ(ಪಕ್ಷೇತರ), ಜಾನ್‌ಬೆನ್ನಿ(ಪಕ್ಷೇತರ), ಎಸ್.ಕೆ ಸುಧೀಂದ್ರ(ಪಕ್ಷೇತರ), ವೈ. ಶಶಿಕುಮಾರ್(ಪಕ್ಷೇತರ), ಡಿ. ಮೋಹನ್(ಪಕ್ಷೇತರ) ಮತ್ತು ರಾಜಶೇಖರ್(ಪಕ್ಷೇತರ) ಸೇರಿದಂತೆ ಒಟ್ಟು ೧೪ ಮಂದಿ ಅಭ್ಯರ್ಥಿಗಳು ಹಾಗು ನೋಟಾ ಸೇರಿದಂತೆ ೧೫ ಆಯ್ಕೆಗಳನ್ನು ಮತಯಂತ್ರಗಳು ಹೊಂದಿವೆ.
ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್, ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುರೇಶ್ ಆಚಾರ್, ನಗರಸಭೆ ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದು ಪರಿಶೀಲನೆ ನಡೆಸಿದರು.
ಭದ್ರಾವತಿಯಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್, ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುರೇಶ್ ಆಚಾರ್, ನಗರಸಭೆ ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದು ಪರಿಶೀಲನೆ ನಡೆಸಿದರು.
No comments:
Post a Comment