Tuesday, May 9, 2023

ಭದ್ರಾವತಿ ವಿಧಾನಸಭಾ ಕ್ಷೇತ್ರ : ಕಳೆದ ೪ ಚುನಾವಣೆಗಳಲ್ಲಿ ಶೇ.೭೫ರ ಗುರಿ ತಲುಪದ ಮತದಾನ

    ಭದ್ರಾವತಿ, ಮೇ. ೯ : ಕಳೆದ ೪ ವಿಧಾನಸಭಾ ಚುನಾವಣೆ ಮತದಾನ ಪ್ರಮಾಣ ಶೇ.೭೫ರ ಗುರಿ ತಲುಪಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಕ್ಷೇತ್ರದಲ್ಲಿ ಹೆಚ್ಚಿನ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸಿದೆ. ಈಗಲಾದರೂ ಮತದಾರರು ಎಚ್ಚೆತ್ತುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
    ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ವಿಶಿಷ್ಟತೆಯಿಂದ ಕೂಡಿದ್ದು, ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು, ಕುಟುಂಬ ವರ್ಗದವರು, ಅಸಂಘಟಿತ ಕಾರ್ಮಿಕರು, ಕೃಷಿಕರು, ವ್ಯಾಪಾರಿಗಳು ಹೆಚ್ಚಾಗಿದ್ದಾರೆ. ಬಹುತೇಕ ಮಧ್ಯಮ ಹಾಗು ಬಡ ವರ್ಗದ ಕುಟುಂಬದವರಾಗಿದ್ದು, ಶೈಕ್ಷಣಿಕವಾಗಿ ಸಹ ಸ್ವಲಮಟ್ಟಿ ಹಿಂದುಳಿದಿದ್ದಾರೆ. ಕಳೆದ ೪ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಶೇ.೭೫ರ ಗುರಿ ತಲುಪಿಲ್ಲ.
    ೨೦೦೪ರ ಚುನಾವಣೆಯಲ್ಲಿ ಒಟ್ಟು ೭ ಅಭ್ಯರ್ಥಿಗಳಿದ್ದು, ಶೇ.೬೭.೭೬ರಷ್ಟು ಮತ್ತು ೨೦೦೮ರ ಚುನಾವಣೆಯಲ್ಲೂ ಒಟ್ಟು ೭ ಅಭ್ಯರ್ಥಿಗಳಿದ್ದು, ಶೇ.೬೩.೮೧ರಷ್ಟು ಮತದಾನವಾಗಿದೆ. ೨೦೧೩ರ ಚುನಾವಣೆಯಲ್ಲಿ ಒಟ್ಟು ೧೭ ಮಂದಿ ಅಭ್ಯರ್ಥಿಗಳಿದ್ದು, ಶೇ. ೭೨.೦೧ರಷ್ಟು ಹಾಗು ೨೦೧೮ರ ಚುನಾವಣೆಯಲ್ಲಿ  ಒಟ್ಟು ೧೫ ಅಭ್ಯರ್ಥಿಗಳಿದ್ದು, ಶೇ.೭೩.೫೯ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗ ಈ ಬಾರಿ ಹೆಚ್ಚಿನ ಗುರಿ ಸಾಧಿಸಬೇಕೆಂದು ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಈ ಕಾರ್ಯಕ್ಕೆ ಹಲವು ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಸ್ವಯಂ ಸೇವಕರು ಸಹ ಕೈಜೋಡಿಸಿದ್ದಾರೆ. ಈ ಬಾರಿ ಹೆಚ್ಚಿನ ಮತದಾನ ನಿರೀಕ್ಷಿಸಲಾಗಿದೆ.
ಮಳೆ ಆತಂಕ :
    ಈ ಬಾರಿ ಚುನಾವಣೆಗೆ ಮಳೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಮಂಗಳವಾರ ಸಂಜೆಯಿಂದ ಮಳೆಯಾಗುತ್ತಿದೆ. ಬುಧವಾರ ಮಳೆ ಪ್ರಮಾಣ ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ಮತದಾನಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ.

No comments:

Post a Comment