ಕರ್ನಾಟಕ ಬಂದ್ ಬೆಂಬಲಿಸಿ ಭದ್ರಾವತಿಯಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ರಸ್ತೆ ತಡೆ ನಡೆಸಲಾಯಿತು.
ಭದ್ರಾವತಿ : ರಾಜ್ಯಾದ್ಯಂತ ಶುಕ್ರವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ನಗರದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಶಾಲಾ-ಕಾಲೇಜು, ಸರ್ಕಾರಿ ಕಛೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿರುವ ಬಿ.ಎಚ್ ರಸ್ತೆಯಲ್ಲಿ ಕೆಲವೆಡೆ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಣೆಯಿಂದ ಮುಚ್ಚಲ್ಪಟ್ಟಿದ್ದವು. ಉಳಿದಂತೆ ಪೆಟ್ರೋಲ್ ಬಂಕ್, ಹೋಟೆಲ್, ಮಾಲ್, ಕ್ಲಿನಿಕ್, ಬ್ಯಾಂಕ್, ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸರ್ಕಾರಿ ಹಾಗು ಖಾಸಗಿ ಬಸ್ ಸಂಚಾರ ವಿರಳವಾಗಿತ್ತು. ಉಳಿದಂತೆ ವಾಹನಗಳ ಸಂಚಾರ ಎಂದಿನಂತೆ ಕಂಡು ಬಂದಿತು.
ವಕೀಲರಿಂದ ರಸ್ತೆ ತಡೆ :
ಕರ್ನಾಟಕ ಬಂದ್ ಬೆಂಬಲಿಸಿ ತಾಲೂಕು ವಕೀಲರ ಸಂಘದ ವತಿಯಿಂದ ರಸ್ತೆ ತಡೆ ನಡೆಸಲಾಯಿತು. ವಕೀಲರು ಕಲಾಪಗಳಿಂದ ಹೊರಗುಳಿದು ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ನೇತೃತ್ವದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಕಾವೇರಿ ನೀರು ತಮಿಳುನಾಡಿಗೆ ಬಿಡದೆ ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದರು.
ಮಳೆ ಇಲ್ಲದೆ ಇದೀಗ ರಾಜ್ಯದೆಲ್ಲೆಡೆ ಬರಗಾಲ ಎದುರಾಗಿದ್ದು, ರಾಜ್ಯದಲ್ಲಿ ಸಂಕಷ್ಟ ಎದುರಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ನೀರು ಹರಿಸಬಾರದು. ರಾಜ್ಯದ ಜನರ ಹಿತಕಾಪಾಡಬೇಕೆಂದರು.
ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ನಗರದ ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
No comments:
Post a Comment