ಭದ್ರಾವತಿ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಹುತ್ತಾ ಸಹ್ಯಾದ್ರಿ ಬಡಾವಣೆಯ ಶ್ರೀ ರಂಗನಾಥ ಕೃಪದಲ್ಲಿ ಸಮಾಜ ಸೇವಕ ದಿವಂಗತ ಬಿ.ಎಚ್. ಮಹಾದೇವಪ್ಪ ಕುಟುಂಬ ವರ್ಗದವರು ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ನಂತರ ಜರುಗಿದ ಧರ್ಮಸಭೆಯಲ್ಲಿ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು.
ಭದ್ರಾವತಿ: ಮನುಷ್ಯರ ಬದುಕು ಉತ್ತಮವಾಗಿರಲು ಧರ್ಮವೇ ದಿಕ್ಸೂಚಿ. ಸಜ್ಜನ ವ್ಯಕ್ತಿಗಳ ಹಾಗು ಆದರ್ಶ ವ್ಯಕ್ತಿಗಳ ಒಡನಾಟದಿಂದ ಸಕಲ ಶ್ರೇಯಸ್ಸು ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಭಗವತ್ಪಾದರು ಸೋಮವಾರ ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಹುತ್ತಾ ಸಹ್ಯಾದ್ರಿ ಬಡಾವಣೆಯ ಶ್ರೀ ರಂಗನಾಥ ಕೃಪದಲ್ಲಿ ಸಮಾಜ ಸೇವಕ ದಿವಂಗತ ಬಿ.ಎಚ್. ಮಹಾದೇವಪ್ಪ ಕುಟುಂಬ ವರ್ಗದವರು ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡು ನಂತರ ನಡೆದ ಧರ್ಮಸಭೆಯಲ್ಲಿ ಆರ್ಶೀವಚನ ನೀಡಿದರು.
ಧರ್ಮ ಎಂದರೆ ನುಡಿಯುವ ಮಾತಲ್ಲ. ಜೀವನದ ನಿಜವಾದ ಆಚರಣೆ. ಅದೊಂದು ಜೀವನ ವಿಧಾನ. ಜೀವನ ಎಂಬುದು ತೆರೆದಿಟ್ಟ ಪುಸ್ತಕ. ಮೊದಲ ಹಾಗು ಕೊನೆಪುಟವನ್ನು ದೇವರು ಬರೆದಿರುತ್ತಾನೆ. ನಡುವಿನ ಪುಟಗಳನ್ನು ನಾವು ರೂಪಿಸಿಕೊಳ್ಳಬೇಕು. ಮೊದಲಪುಟ ಹುಟ್ಟು ಕೊನೆಯ ಪುಟ ಸಾವು. ನಡುವಿನ ಬದುಕಿನ ಪುಟಗಳನ್ನು ಸಮೃದ್ಧವಾಗಿ ರೂಪಿಸಿಕೊಳ್ಳಬೇಕಿರುವುದು ಅವರವರ ಜವಾಬ್ದಾರಿ ಎಂದರು.
ಪ್ರಸ್ತುತ ದಿನಗಳಲ್ಲಿ ತಂದೆ-ತಾಯಿ, ಗುರು-ಶಿಷ್ಯರ ನಡುವಿನ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಇದರಿಂದಾಗಿ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ ಭಗವತ್ಪಾದರು, ಧರ್ಮ ಕಾರ್ಯಗಳಿಂದ ಇಡೀ ಕುಟುಂಬಕ್ಕೆ ಸದ್ಭಾವನೆ ದೊರೆಯಲು ಸಾಧ್ಯ ಎಂದರು.
ಬಿಳಕಿ ಹಿರೇಮಠದ ಪೀಠಾಧ್ಯಕ್ಷರಾದ ಷ|| ಬ್ರ|| ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮ ಪ್ರಾಚೀನವಾದ ಧರ್ಮ. ಐದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಧರ್ಮ ಮತ್ತು ಸಂಸ್ಕೃತಿ ಸಮಾಜವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುತ್ತವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದರು.
ಸಮಾರಂಭದಲ್ಲಿ ತೀರ್ಥಹಳ್ಳಿ ಮಳಲಿಮಠದ ಷ|| ಬ್ರ|| ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಸಮಾರಂಭದ ಆಯೋಜಕರಾದ ಮನು ಮತ್ತು ಸ್ವಾಮಿ ಪಾಲ್ಗೊಂಡಿದ್ದರು. ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಗೀತಾ ರಾಜ್‌ಕುಮಾರ್, ಉದ್ಯಮಿ ಬಿ.ಕೆ.ಜಗನ್ನಾಥ್, ಸಮಾಜದ ಮುಖಂಡರಾದ ಸಿದ್ದಲಿಂಗಯ್ಯ, ಆರ್. ಮಹೇಶ್‌ಕುಮಾರ್, ಅಡವೀಶಯ್ಯ, ರೂಪೇಶ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ಗ್ರಾಯಕಿ ಶಾಂತ ಆನಂದ್ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment