ಕೆಡಿಪಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ
ಭದ್ರಾವತಿ ಕ್ಷೇತ್ರದ ನಿರ್ಲಕ್ಷ್ಯ ಖಂಡಿಸಿ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಧರಣಿ ಸತ್ಯಾಗ್ರಹಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಪಂದಿಸಿದ್ದು, ಶನಿವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಭದ್ರಾವತಿ: ಕ್ಷೇತ್ರದ ನಿರ್ಲಕ್ಷ್ಯ ಖಂಡಿಸಿ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಧರಣಿ ಸತ್ಯಾಗ್ರಹಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಪಂದಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಶಿವಮೊಗ್ಗ, ಸಾಗರ, ಸೊರಬ ಕ್ಷೇತ್ರಗಳಿಗೆ ಮಾತ್ರ ಪದೇ ಪದೇ ಭೇಟಿ ನೀಡುತ್ತಿದ್ದು, ಆದರೆ ಈ ಕ್ಷೇತ್ರಕ್ಕೆ ಇದುವರೆಗೂ ಭೇಟಿ ನೀಡದೆ ನಿರ್ಲಕ್ಷ ವಹಿಸಿದ್ದಾರೆ. ಕ್ಷೇತ್ರದ ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಕಳಪೆ ಕಾಮಗಾರಿಗಳು ಹೆಚ್ಚಾಗಿ ಅವ್ಯವಸ್ಥೆ ಉಂಟಾಗಿದೆ. ಇದುವರೆಗೂ ಸಚಿವರು ಕೆಡಿಪಿ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಿ ಬಗೆಹರಿಸದಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ೨೦೧೭ರಲ್ಲಿ ಪ್ರಾರಂಭವಾದ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪದೇ ಪದೇ ಹೋರಾಟಗಳ ಮೂಲಕ ಮನವಿ ಸಲ್ಲಿಸಿದ್ದರೂ ಸಹ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರ ಹೆಸರಿಗೆ ಅವಮಾನವಾಗುತ್ತಿದ್ದರು ಸಹ ಇದುವರೆಗೂ ಪೂರ್ಣಗೊಳಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಹಳೇನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದ ಮುಂಭಾಗ ಅ.೩೧ರಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಸಚಿವ ಮಧು ಬಂಗಾರಪ್ಪ ಶನಿವಾರ ಪ್ರತಿಭಟನಾ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ಡಾ. ಬಿ.ಆರ್ ಅಂಬೇಡ್ಕರ್ ಹಾಗು ಎಸ್. ಬಂಗಾರಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಮಿತಿವತಿಯಿಂದ ಮನವಿ ಸ್ವೀಕರಿಸಿ ನಂತರ ಅಂಬೇಡ್ಕರ್ ಭವನ ಪರಿಶೀಲನೆ ನಡೆಸುವ ಮೂಲಕ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವ ಹಾಗು ಶೀಘ್ರದಲ್ಲಿಯೇ ಕೆಡಿಪಿ ಸಭೆ ನಡೆಸಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ಶಾಸಕ ಬಿ.ಕೆ ಸಂಗಮೇಶ್ವರ್, ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಉಪಾಧ್ಯಕ್ಷರಾದ ಬ್ರಹ್ಮಲಿಂಗಯ್ಯ, ರಂಗಪ್ಪ, ಶೌಕತ್, ಎಂ.ವಿ ಚಂದ್ರಣ್ಣ, ಕಾರ್ಯದರ್ಶಿಗಳಾದ ರಾಕೇಶ್ ಕುಮಾರ್, ವೀರೇಶ್, ಪ್ರಧಾನ ಸಂಚಾಲಕರಾದ ಶ್ರೀನಿವಾಸ್, ಬಸವರಾಜ್, ಸಂಚಾಲಕರಾದ ಅಜಿತ್, ಅಜಯ್, ಕೆ. ಶಿವಕುಮಾರ್, ಟಿ.ಎನ್ ನಾಗರಾಜ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment