ಭದ್ರಾವತಿಯಲ್ಲಿ ಶುಕ್ರವಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗು ಕ್ಷೇತ್ರ ಸಮನ್ವಯ ಸಂಪನ್ಮೂಲ ಕೇಂದ್ರದ ವತಿಯಿಂದ ವಿಶೇಷ ಚೇತನ ಮಕ್ಕಳ ಅಗತ್ಯ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಸಮಾರಂಭ ಆಯೋಜಿಸಲಾಗಿತ್ತು.
ಭದ್ರಾವತಿ: ವಿಶೇಷ ಚೇತನ ಮಕ್ಕಳಿಗೆ ಜೀವನ ಕೌಶಲ್ಯ ನೀಡುವುದು ಸುಲಭದ ಕೆಲಸವಲ್ಲ. ಇವರಿಗೆ ಶಕ್ತಿ ತುಂಬಲು ಪೋಷಕರು ಸೇರಿದಂತೆ ಎಲ್ಲರೂ ಸಹ ಆಶಾಕಿರಣದಂತೆ ಕೈಜೋಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
ಅವರು ಶುಕ್ರವಾರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗು ಕ್ಷೇತ್ರ ಸಮನ್ವಯ ಸಂಪನ್ಮೂಲ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಚೇತನ ಮಕ್ಕಳ ಅಗತ್ಯ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯ ಶಿಕ್ಷಣಕ್ಕಿಂತ ವಿಶೇಷಚೇತನ ಮಕ್ಕಳಿಗೆ ನೀಡುವ ಜೀವನ ಕೌಶಲ್ಯದ ಶಿಕ್ಷಣ ಮಹತ್ವವಾದದ್ದು. ಶಿಕ್ಷಣದ ಅರ್ಥ ಮತ್ತು ವ್ಯಾಪ್ತಿ ವಿಶಾಲವಾದದ್ದು. ನಾಲ್ಕು ಗೋಡೆಗಳ ನಡುವೆ ಕಲಿಕೆ ಮೂಲಕ ದೊರೆಯುತ್ತಿದ್ದ ಶಿಕ್ಷಣ ಇಂದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಶಾಲೆ ಮಾತ್ರವಲ್ಲದೆ ಸಮಾಜದ ಸಹಭಾಗಿತ್ವವನ್ನು ಹೊಂದಿದೆ. ಎಲ್ಲಾ ಅಂಗಾಂಗಗಳು ಉತ್ತಮವಿರುವ ಮಕ್ಕಳು ಪುಸ್ತಕದ ಶಿಕ್ಷಣ ಪಡೆದರೆ, ವಿಶಿಷ್ಟಚೇತನ ಮಕ್ಕಳು ಜೀವನದ ಶಿಕ್ಷಣ ಪಡೆಯುತ್ತಾರೆ. ಈ ಮೂಲಕವೂ ಸಾಧನೆ ಸಾಧ್ಯವಿದೆ. ಶಿಕ್ಷಣದಿಂದ ಮಾತ್ರ ದೇಶದ ಬದಲಾವಣೆ ಸಾಧ್ಯ. ಸಮುದಾಯ ಸುಖವಾಗಿದ್ದರೆ ದೇಶ ಸುಖವಾಗಿರುತ್ತದೆ ಎಂದರು.
ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಯೋಜನೆಗಳಿಂದ ಮಾತ್ರವೇ ವಿಶಿಷ್ಟಚೇತನರ ಸಮಸ್ಯೆಗಳ ನಿವಾರಣೆ ಅಸಾಧ್ಯ. ಸರ್ಕಾರೇತರ ಸಂಸ್ಥೆಗಳಿಂದ ಹಾಗು ಸಮಾಜದ ವಿವಿಧ ಸಂಘ ಸಂಸ್ಥೆಗಳಿಂದ ಸ್ಪಂದನೆ ದೊರೆತಾಗ ಮಾತ್ರ ವಿಶಿಷ್ಟಚೇತನ ಮಕ್ಕಳ ಸಮಸ್ಯೆಗಳ ನಿವಾರಣೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಸಿ.ಆರ್.ಸಿ ಕೇಂದ್ರದ ಡಾ. ವಿಜಯರಾಜ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ ಬಾಯಿ, ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ, ಶಿಕ್ಷಣ ಇಲಾಖೆಯ ಪ್ರಭಾಕರ್, ವೇಣುಗೋಪಾಲ್, ವಿಜಯ್ ಮತ್ತಿತರರಿದ್ದರು. ಕಾರ್ಯಕ್ರಮದಲ್ಲಿ ೩೮ ಮಕ್ಕಳಿಗೆ ಶೈಕ್ಷಣಿಕ ವಸ್ತುಗಳ ಕಿಟ್ ವಿತರಿಸಲಾಯಿತು.
ಹಳೆನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕ್ಷೇತ್ರ ಸಮನ್ವಯ ಸಂಪನ್ಮೂಲ ವ್ಯಕ್ತಿ ಡಿ.ಎಚ್ ತೀರ್ಥಪ್ಪ ಸ್ವಾಗತಿಸಿದರು. ರೇಣುಕ ನಿರೂಪಿಸಿದರು. ಜಯಲ ಕ್ಷ್ಮೀ ವಿಶೇಷ ಮಕ್ಕಳ ಪಟ್ಟಿ ಓದಿದರು. ಟಿ.ಎನ್ ಪ್ರತಿಭಾ ವಂದಿಸಿದರು.
No comments:
Post a Comment