Tuesday, December 19, 2023

ಪುರಾಣ ಪ್ರಸಿದ್ದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಡಿ.೨೩, ೨೪ರಂದು ಎರಡು ವೈಕುಂಠ ಏಕಾದಶಿ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ.
    ಭದ್ರಾವತಿ: ಪ್ರತಿವರ್ಷದಂತೆ ಈ ವರ್ಷ ಸಹ ಡಿ.೨೩ ಮತ್ತು ೨೪ರಂದು ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅದ್ದೂರಿಯಿಂದ ಆಚರಿಸಲು ಸಕಲ ಸಿದ್ಧತೆ ಕೈಗೊಂಡಿರುವುದಾಗಿ ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಕೆ.ಆರ್ ನಾಗರಾಜು ತಿಳಿಸಿದರು.
    ಅವರು ಮಂಗಳವಾರ ತಾಲೂಕು ಕಛೇರಿ ತಹಸೀಲ್ದಾರ್ ಸಭಾಂಗಣದಲ್ಲಿ ಈ ಕುರಿತು ಮಾಹಿತಿ ನೀಡಿ, ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ನಡೆಯುವ ಎರಡು ದಿನಗಳ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವ ಯಶಸ್ವಿಗೊಳಿಸಬೇಕು. ಕೋವಿಡ್ ಮುಂಜಾಗ್ರತೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ ಎಂದರು.
    ದೇವಾಲಯ ಸಮಿತಿ ಅಧ್ಯಕ್ಷ ಮಾರುತಿ ಮಾತನಾಡಿ, ಡಿ.೨೩ರಂದು ಬೆಳಗ್ಗೆ ೪.೩೦ರಿಂದ ಪೂಜಾ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಶೇಷ ದರ್ಶನಕ್ಕೆ ಟಿಕೆಟ್ ವಿತರಣೆ ಮಾಡಲಾಗುತ್ತಿದ್ದು, ಇಬ್ಬರ ಪ್ರವೇಶಕ್ಕೆ ಟಿಕೆಟ್ ಬೆಲೆ ರು. ೫೦೦ ಮತ್ತು ನಾಲ್ವರ ಪ್ರವೇಶಕ್ಕೆ ರು. ೧೦೦೦ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
    ದೇವಾಲಯದ ಪ್ರಧಾನ ಅರ್ಚಕರಾದ ವೇ||ಬ್ರ|| ಶ್ರೀ ರಂಗನಾಥ ಶರ್ಮ ಮಾತನಾಡಿ, ಉತ್ಸವಗಳಿಂದ ದೇವರಿಗೆ ಶಕ್ತಿ ದೊರೆಯುತ್ತದೆ. ಆದ್ದರಿಂದ ಉತ್ಸವಗಳ ಸಂಖ್ಯೆ ಹೆಚ್ಚಾಗಬೇಕು ಎಂದರು.
    ದೇವಾಲಯದ ಸಹಾಯಕ ಅರ್ಚಕ ಶ್ರೀನಿವಾಸ್, ದೇವಾಲಯ ಸಮಿತಿ ಪದಾಧಿಕಾರಿಗಳಾದ ಆಶಾ ಪುಟ್ಟಸ್ವಾಮಿ, ಗಿರಿನಾಯ್ಡು, ವಿಶ್ವೇಶ್ವರಗಾಯಕ್ವಾಡ್, ಉಪ ತಹಸೀಲ್ದಾರ್ ಅರಸು, ಮಂಜಾನಾಯ್ಕ, ಕಂದಾಯ ನಿರೀಕ್ಷಕ ಪ್ರಶಾಂತ್, ಹಿರಿಯ ಆರೋಗ್ಯ ನಿರೀಕ್ಷಕ ಆನಂದಮೂರ್ತಿ, ನಾಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment