ಭದ್ರಾವತಿ ತಾಲೂಕಿನ ಗುಡ್ಡದ ನೇರಲಕೆರೆ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ.
ಭದ್ರಾವತಿ : ತಾಲೂಕಿನ ಗುಡ್ಡದ ನೇರಲಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸಿರುವ ವಿಡಿಯೋ ಹರಿದಾಡುತ್ತಿದ್ದು, ಇದೀಗ ಈ ಸಂಬಂಧ ದಲಿತ ಸಂಘಟನೆಗಳು ಆಕ್ರೋಶ ಹೊರಹಾಕುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಲೋಕಾಯುಕ್ತ ನಿರೀಕ್ಷಕ ಸುರೇಶ್ ಅವರಿಗೂ ದೂರು ನೀಡಲಾಗಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವಿಚಾರ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ತಕ್ಷಣ ಶಾಲಾ ಮುಖ್ಯ ಶಿಕ್ಷಕ ಶಂಕರಪ್ಪ ಹಾಗು ಇದಕ್ಕೆ ಸಹಕರಿಸಿದ ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಲಾಗುವುದು ಎಂದರು.
ಭದ್ರಾವತಿ ತಾಲೂಕಿನ ಗುಡ್ಡದ ನೇರಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಗುರುವಾರ ಲೋಕಾಯುಕ್ತ ನಿರೀಕ್ಷಕ ಸುರೇಶ್ ಅವರಿಗೆ ದೂರು ಸಲ್ಲಿಸಿದರು.
ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ವಿರುದ್ಧ ಹೋರಾಟ ನಡೆಸುವ ಮೂಲಕ ಅವರ ವೈಫಲ್ಯ ಎತ್ತಿ ಹಿಡಿಯುವುದಾಗಿ ಎಚ್ಚರಿಸಿದರು.
ವಿಡಿಯೋದಲ್ಲಿ ಏನಿದೆ?
ಹರಿದಾಡುತ್ತಿರುವ ವಿಡಿಯೋದಲ್ಲಿ ಸಮವಸ್ತ್ರದಲ್ಲಿರುವ ಇಬ್ಬರು ಶಾಲಾ ಬಾಲಕಿಯರು ಶೌಚಾಲಯ ಸ್ವಚ್ಛಗೊಳಿಸುತ್ತಿರುವುದು ಕಂಡು ಬರುತ್ತಿದೆ. ಆದರೆ ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಅಲ್ಲದೆ ವಿಡಿಯೋ ಹರಿದಾಡುವವರೆಗೂ ಈ ಸಂಬಂಧ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಕುರಿತ ಯಾವುದೇ ಆರೋಪಗಳು ಕೇಳಿ ಬಂದಿಲ್ಲ. ಈ ಹಿನ್ನಲೆಯಲ್ಲಿ ವಿಡಿಯೋ ಚಿತ್ರೀಕರಣಗೊಂಡಿರುವ ಕುರಿತು ಹೆಚ್ಚಿನ ತನಿಖೆ ನಡೆಯಬೇಕಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ : ಜಿಲ್ಲಾ ಉಪನಿರ್ದೇಶಕರಿಗೆ ವರದಿ ಸಲ್ಲಿಕೆ
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಕರಣ ಹಿನ್ನಲೆಯಲ್ಲಿ ಖುದ್ಧಾಗಿ ಶಾಲೆಗೆ ಭೇಟಿ ನೀಡಿದ್ದು, ಈ ಸಂಬಂಧ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿ, ಘಟನೆಗೆ ಸಂಬಂಧಿಸಿದಂತೆ ಶಿಕ್ಷಕರು ಹಾಗು ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಲಾಗಿದೆ. ಶಿಕ್ಷಕರು ನಾವು ಯಾವುದೇ ವಿದ್ಯಾರ್ಥಿಗಳಿಗೆ ಶೌಚಾಲಯ ಸ್ವಚ್ಛಗೊಳಿಸಿಲು ಹೇಳಿಲ್ಲ. ಬದಲಾಗಿ ಶೌಚಾಲಯ ಬಳಕೆಯ ನಂತ ನೀರು ಹಾಕುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ವಿದ್ಯಾರ್ಥಿಗೂ ಇದಕ್ಕೆ ವಿರುದ್ಧ ಎಂಬಂತೆ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ವರದಿಯನ್ನು ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಲಾಗಿದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಭೇಟಿ :
ಘಟನೆ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ಗುರುವಾರ ಸಂಜೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ವೃತ್ತ ನಿರೀಕ್ಷಕ ಜಗದೀಶ್ ಹಂಚಿನಾಳ್ ಹಾಗು ಡಿಎಸ್‌ಎಸ್ ಮುಖಂಡರು ಉಪಸ್ಥಿತರಿದ್ದರು.
ಭದ್ರಾವತಿ ತಾಲೂಕಿನ ಗುಡ್ಡದ ನೇರಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಂಜೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
No comments:
Post a Comment