Tuesday, October 8, 2024

ವಾಹನ ಅಡ್ಡಗಟ್ಟಿ ನಗದು ಹಣ, ಮೊಬೈಲ್ ದೋಚಿದ ಪ್ರಕರಣ

೩ ಆರೋಪಿಗಳಿಗೆ ೭ ವರ್ಷ, ೧ ತಿಂಗಳು ಸಾದಾ ಸೆರೆವಾಸ 

ಭದ್ರಾವತಿ ನಗರದ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಡ್ಡಗಟ್ಟಿ ವ್ಯಕ್ತಿಯೊಬ್ಬರನ್ನು ಬೆದರಿಸಿ ನಗದು ಹಣ, ಮೊಬೈಲ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿರುವ ೩ ಆರೋಪಿಗಳು. 
    ಭದ್ರಾವತಿ: ನಗರದ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಡ್ಡಗಟ್ಟಿ ವ್ಯಕ್ತಿಯೊಬ್ಬರನ್ನು ಬೆದರಿಸಿ ನಗದು ಹಣ, ಮೊಬೈಲ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ೭ ವರ್ಷ ೧ ತಿಂಗಳು ಸಾದಾ ಸೆರೆವಾಸ ಶಿಕ್ಷೆ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. 
    ಶಿವಮೊಗ್ಗ ನಗರದ ನಿವಾಸಿಗಳಾದ ಸಯ್ಯದ್ ಇಬ್ರಾಹಿಂ ಅಲಿಯಾಸ್ ರಹಿಲ್(೨೩), ಮೊಹಮ್ಮದ್ ಮುಸ್ತಫಾ(೨೨) ಮತ್ತು ಮೊಹಮ್ಮದ್ ಅಲ್ಲಾಭಕ್ಷಿ (೨೨) ಶಿಕ್ಷೆಗೊಳಗಾದ ಆರೋಪಿಗಳು. 
    ಅನ್ವರ್ ಕಾಲೋನಿಯ ನಿವಾಸಿ ಮೊಹಮ್ಮದ್ ಖಾಲೀದ್(೨೧) ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಅವರನ್ನು ತಡೆದು ಅಡ್ಡಗಟ್ಟಿ ಬೆದರಿಸಿ ನಗದು ಹಣ, ಮೊಬೈಲ್ ಮತ್ತು ವಾಚ್ ಕಿತ್ತು ಕೊಂಡು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಅಂದಿನ ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 
    ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್‌ರವರು ವಿಚಾರಣೆ ನಡೆಸಿ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ  ಪ್ರಕರಣದ ವಾದ ಮಂಡಿಸಿದ್ದರು. 

No comments:

Post a Comment