Tuesday, October 1, 2024

ಹಿಂದೂ-ಮುಸ್ಲಿಂ ಸೌಹಾರ್ದತೆ ಸಂಕೇತವಾದ ವಿಸರ್ಜನಾ ಪೂರ್ವ ಮೆರವಣಿಗೆ

    ಭದ್ರಾವತಿ: ನಗರದ ಕೂಲಿ ಬ್ಲಾಕ್ ಶೆಡ್ ಶ್ರೀ ರಾಮ ದೇವಾಲಯದ ಬಳಿ ಶ್ರೀ ರಾಮ ಹಿಂದೂ ಸೇವಾ ಸಮಿತಿ ವತಿಯಿಂದ ಈ ಬಾರಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆ ಹಿಂದೂ-ಮುಸ್ಲಿಂ  ಸೌಹಾರ್ದತೆ ಸಂಕೇತವಾಗಿ ಕಂಡು ಬಂದಿತು. 
    ಕೂಲಿ ಬ್ಲಾಕ್ ಶೆಡ್ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯದವರು ವಾಸಿಸುತ್ತಿದ್ದು, ಇಲ್ಲಿ ಹಬ್ಬ-ಹರಿದಿನಗಳನ್ನು ಶಾಂತಿ, ಸೌಹಾರ್ದತೆಯಿಂದ ಹಾಗು ಭಕ್ತಿ-ಭಾವನೆ ಮೂಡಿಸುವ ಭಾವೈಕತ್ಯತೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.   
    ಪ್ರತಿ ವರ್ಷ ಶ್ರೀ ರಾಮ ಹಿಂದೂ ಸೇವಾ ಸಮಿತಿ ವತಿಯಿಂದ ವಿನಾಯಕ ಚತುರ್ಥಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಹಿಂದೂ ಯುವಕರೊಂದಿಗೆ ಮುಸ್ಲಿಂ ಯುವಕರು ಸಹ ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಗಳಲ್ಲಿ ಕೈ ಜೋಡಿಸುತ್ತಿರುವುದು ವಿಶೇಷತೆಯಾಗಿದೆ. 
    ಈ ಬಾರಿ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಮುಸ್ಲಿಂ ಯುವಕರು ಸಹ ಪಾಲ್ಗೊಂಡು ಅಬ್ಬರದ ಹಾಡಿನ ಸದ್ದಿಗೆ ಕುಣಿದು ಸಂಭ್ರಮಿಸುವ ಜೊತೆ ಪ್ರಸಾದ ವಿತರಣೆ ಸಹ ಕೈಗೊಂಡು ಗಮನ ಸೆಳೆದರು. 
    ಮಧ್ಯಾಹ್ನ ಆರಂಭಗೊಂಡ ಮೆರವಣಿಗೆ ರಾತ್ರಿ ಸುಮಾರು ೧೦ ಗಂಟೆವರೆಗೂ ನಡೆಯಿತು. ನಂತರ ಮೂರ್ತಿಯನ್ನು ಭದ್ರಾ ನದಿಯಲ್ಲಿ ವಿಸರ್ಜಿಸುವ ಮೂಲಕ ವಿನಾಯಕ ಚತುರ್ಥಿ ಆಚರಣೆ ಸಂಪನ್ನಗೊಳಿಸಲಾಯಿತು. ಇಲ್ಲಿನ ಹಿಂದೂ-ಮುಸ್ಲಿಂ ನಡುವಿನ ಸೌಹಾರ್ದತೆ ಕಂಡು ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರು ಸಹ ಬೆರಗುಗೊಂಡಿದ್ದಾರೆ.  
 

ಭದ್ರಾವತಿ ನಗರದ ಕೂಲಿ ಬ್ಲಾಕ್ ಶೆಡ್ ಶ್ರೀ ರಾಮ ದೇವಾಲಯದ ಬಳಿ ಶ್ರೀ ರಾಮ ಹಿಂದೂ ಸೇವಾ ಸಮಿತಿ ವತಿಯಿಂದ ಈ ಬಾರಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆ ಹಿಂದೂ-ಮುಸ್ಲಿಂ  ಸೌಹಾರ್ದತೆ ಸಂಕೇತವಾಗಿ ಕಂಡು ಬಂದಿತು. 
 

No comments:

Post a Comment