Wednesday, October 30, 2024

ನ.೫ರಂದು ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮಾಚರಣೆ

ಭದ್ರಾವತಿ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮಾಚರಣೆ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಾಹಿತಿ ನೀಡಿದರು. 
    ಭದ್ರಾವತಿ: ನಗರದ ಅಪ್ಪರ್‌ಹುತ್ತಾ ಶ್ರೀ ಭೈರವೇಶ್ವರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಂಭ್ರಮಾಚರಣೆ ಹಾಗು ಸರ್ವ ಸದಸ್ಯರ ವಾರ್ಷಿಕ ಸಭೆ ನ.೫ರಂದು ಸಂಜೆ ೫ ಗಂಟೆಗೆ ಜನ್ನಾಪುರ ಮಲ್ಲೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್ ಮಲ್ಲೇಶ್ ಹೇಳಿದರು. 
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೯೮ರಲ್ಲಿ ಆರಂಭಗೊಂಡ ಸಂಘ ನಿರಂತರವಾಗಿ ಲಾಭದಲ್ಲಿ ಮುನ್ನಡೆದುಕೊಂಡು ಬರುತ್ತಿದೆ. ಇದೀಗ ೨೫ ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಸಂಭ್ರಮಾಚರಣೆಗೆ ಮುಂದಾಗಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಸಮಾರಂಭದ ದಿವ್ಯ ಸಾನಿಧ್ಯವಹಿಸಲಿದ್ದಾರೆ. ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಹೃದಯ ರೋಗ ತಜ್ಞ, ಸಂಸದ ಡಾ. ಸಿ.ಎನ್ ಮಂಜುನಾಥ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು. 
    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಸಂಘದ ಪ್ರವರ್ತಕರಾದ ತಾಲೂಕು ಒಕ್ಕಲಿಗರ ಸಂಘದ ಹಾಲಿ ಮತ್ತು ಮಾಜಿ ಪೋಷಕರು, ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಮತ್ತು ನಿರ್ದೇಶಕರು ಉಪಸ್ಥಿತರಿರುವರು ಎಂದರು. 
    ನ.೧ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ: 
    ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ನ.೧ರಂದು ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ, ಮಲ್ಲೇಶ್ವರ ಸಮುದಾಯ ಭವನ ಟ್ರಸ್ಟ್, ರೋಟರಿ ಕ್ಲಬ್, ತಾಲೂಕು ಒಕ್ಕಲಿಗರ ಸಂಘ, ಶುಗರ್ ಟೌನ್, ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಮತ್ತು ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘ ವತಿಯಿಂದ ನ.೧ರಂದು ಜನ್ನಾಪುರ ಮಲ್ಲೇಶ್ವರ ಸಭಾ ಭವನದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೨.೩೦ರ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. 
    ಮಧುಮೇಹ ವಿಭಾಗ, ಶ್ವಾಸಕೋಶ ವಿಭಾಗ, ಹೃದಯ ರೋಗ ವಿಭಾಗ, ಕೀಲು ಮತ್ತು ಮೂಳೆ ವಿಭಾಗ, ಕಿವಿ, ಮೂಗು ಗಂಟಲು ವಿಭಾಗ, ಚರ್ಮರೋಗ ವಿಭಾಗ, ನರರೋಗ ವಿಭಾಗ, ದಂತ ಚಿಕಿತ್ಸಾ ವಿಭಾಗ, ಪ್ರಸೂತಿ, ಸ್ತ್ರೀ ರೋಗ ವಿಭಾಗ ಮತ್ತು ಮಕ್ಕಳ ವಿಭಾಗಗಳಲ್ಲಿ ತಪಾಸಣೆ ನಡೆಯಲಿದೆ. ವೈದ್ಯರ ಸಲಹೆ ಮೇರೆಗೆ ಇ.ಸಿ.ಜಿ, ಶ್ವಾಸಕೋಶ ಸ್ಕ್ಯಾನಿಂಗ್(ಉಸಿರಾಟ), ಹೃದಯ ಪರೀಕ್ಷೆ(ಇಕೋ), ಬಿ.ಪಿ, ಶುಗರ್, ಮೂಳೆ ಸಾಂದ್ರತೆ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದು ಎಂದರು. 
    ಸಂಘದ ಉಪಾಧ್ಯಕ್ಷ ಎಲ್. ದೇವರಾಜ್, ಕುಮಾರ್, ಗಾಯಿತ್ರಿ, ಕೆಂಪಯ್ಯ, ಪರಮಶಿವ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

No comments:

Post a Comment