ಭದ್ರಾವತಿ ಕನಕಮಂಟಪ ಮೈದಾನದಲ್ಲಿ ನಡೆದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ನಾಡಧ್ವಜಾರೋಹಣ ನೆರವೇರಿಸಿದರು.
ಭದ್ರಾವತಿ; ಕನ್ನಡ ನಾಡಿನಲ್ಲಿ ಹುಟ್ಟಿದ ನಾವೆಲ್ಲರು ಈ ನಾಡಿನ ಭಾಷೆ, ಸಂಸ್ಕೃತಿ, ಪರಂಪರೆ ಉಳಿಸಲು ಕಟಿಬದ್ದರಾಗಬೇಕಿದೆ ಎಂದು ತಹಶೀಲ್ದಾರ್ ಕೆ.ಆರ್ ನಾಗರಾಜು ಹೇಳಿದರು.
ಅವರು ಹಳೇನಗರದ ಕನಕಮಂಟಪ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಲಾಗಿದ್ದ ೬೯ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಹಚ್ಚ ಹಸುರಿನ ಸುಂದರಬೆಟ್ಟ, ಗುಡ್ಡಗಳು ಹರಿಯುವ ನದಿಗಳು ಸಾಧುಸಂತರು, ದಾಸರುಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡಿಗೆ ಧೀಮಂತಶಕ್ತಿ ಇದೆ. ಭವ್ಯ ಪರಂಪರೆ ಹೊಂದಿರುವ ಕನ್ನಡ ನಾಡಿನಲ್ಲಿ ನಾವುಗಳು ಜನಿಸಿರುವುದು ಪುಣ್ಯ. ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಅನ್ಯಭಾಷಿಗರಿಕೆ, ಯುವಪೀಳಿಗೆಗೆ ತಿಳಿಸಬೇಕಾದ ಹೆಚ್ಚಿನ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ನಾವು ಮರೆಯಬಾರದು ಎಂದರು.
ನಾಡಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ಕನ್ನಡ ಭಾಷೆಯನ್ನು ನಮ್ಮ ತಾಯಿ ಎಂದು ತಿಳಿದು ಗೌರವಿಸಿ ಬೆಳಸಬೇಕು. ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಅದು ನಿತ್ಯೋತ್ಸವವಾಗಬೇಕು. ಕನ್ನಡದ ಮೇಲಿನ ಗೌರವ ಕೇವಲ ಬಾಯಿಯಿಂದ ಬಂದರೆ ಸಾಲದು ಅದು ಅಂತರಾಳದಿಂದ ಬರಬೇಕು. ತಾಯಿ ಕನ್ನಡಾಂಬೆಗೆ ಗೌರವಿಸುವ ಕೆಲಸ ಸರ್ಕಾರ ಸಹ ಮಾಡುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳಲ್ಲಿಯೂ ಕನ್ನಡ ಭಾಷೆ ಕಡ್ಡಾಯಗೊಳಿಸಿದೆ. ಕನ್ನಡ ಭಾಷೆಯನ್ನು ನಾವು ಹೆಚ್ಚು ಹೆಚ್ಚು ಮಾತನಾಡುವ ಮೂಲಕ ಅನ್ಯಭಾಷಿಗರಿಗೂ ಕಲಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಕನ್ನಡನಾಡಿನಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳನ್ನು ಈ ನಾಡಿನ ಕವಿಗಳು, ಸಾಹಿತಿಗಳು ತಿಳಿಸಿಕೊಟ್ಟಿದ್ದಾರೆ. ಕನ್ನಡಕ್ಕೆ ವಿಶೇಷ ಸ್ಥಾನಮಾನಗಳು ಸಹ ಲಭಿಸಿದೆ. ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸುವ ಕೆಲಸ ನಮ್ಮ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಸನ್ಮಾನಿಸಲಾಯಿತು.
ವಿವಿಧ ಶಾಲಾ ಮಕ್ಕಳು ಕನ್ನಡ ನಾಡಿಗಾಗಿ ಶ್ರಮಿಸಿದ ಒನಕೆ ಓಬವ್ವ, ಕಿತ್ತೂರು ರಾಣಿಚನ್ನಮ್ಮ, ಕನಕದಾಸ, ನೇಗಿಲು ಹೊತ್ತ ರೈತ ಸೇರಿದಂತೆ ಹಲವು ಗಣ್ಯರ ವೇಷ ಭೂಷಣಗಳು ಧರಿಸಿದ್ದು ಕಾರ್ಯಕ್ರಮಕ್ಕೆ ಮೆರಗು ತಂದಿತು. ಶಾಲಾ ಬಾಲಕ-ಬಾಲಕಿಯರು ಕನ್ನಡದ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲುಯಜ್ಞಯ್ಯ, ಬಿ.ಕೆ.ಮೋಹನ್, ಚನ್ನಪ್ಪ, ಅನುಸುಧಾ ಮೋಹನ್, ಗೀತಾ ರಾಜ್‌ಕುಮಾರ್, ಬಸವರಾಜ್ ಬಿ. ಆನೆಕೊಪ್ಪ, ಶಶಿಕಲಾ ನಾರಾಯಣಪ್ಪ, ಜಾರ್ಜ್, ರಿಯಾಜ್ ಅಹಮದ್, ಬಿ.ಎಸ್.ಗೋಪಾಲ್, ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ಟಿ. ಪೃಥ್ವಿರಾಜ್, ಶ್ರೀಧರ ಗೌಡ, ಉಮಾ, ಅಪೇಕ್ಷ ಮಂಜುನಾಥ್, ಶಿವಲಿಂಗೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ಕನಕಮಂಟಪ ಮೈದಾನದಲ್ಲಿ ನಡೆದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳು ಕನ್ನಡ ನಾಡಿಗಾಗಿ ಶ್ರಮಿಸಿದ ಒನಕೆ ಓಬವ್ವ, ಕಿತ್ತೂರು ರಾಣಿಚನ್ನಮ್ಮ, ಕನಕದಾಸ, ನೇಗಿಲು ಹೊತ್ತ ರೈತ ಸೇರಿದಂತೆ ಹಲವು ಗಣ್ಯರ ವೇಷ ಭೂಷಣಗಳು ಧರಿಸಿದ್ದು ಕಾರ್ಯಕ್ರಮಕ್ಕೆ ಮೆರಗು ತಂದಿತು.
No comments:
Post a Comment