Friday, November 1, 2024

ಉಕ್ಕಿನ ಎಲ್ಲೆಡೆ ನರಕ ಚತುರ್ದಶಿ, ಲಕ್ಷ್ಮೀಪೂಜೆ ಸಂಭ್ರಮಾಚರಣೆ

ಭದ್ರಾವತಿ ಮನೆಯೊಂದರಲ್ಲಿ ಲಕ್ಷ್ಮೀಪೂಜೆ ಸಂಭ್ರಮದಲ್ಲಿ ತೊಡಗಿರುವುದು. 
    ಭದ್ರಾವತಿ : ಕ್ಷೇತ್ರದಾದ್ಯಂತ ನರಕ ಚತುರ್ದಶಿ ಮತ್ತು ಲಕ್ಷ್ಮೀ ಪೂಜೆ ಹಬ್ಬ ವಿಜೃಂಭಣೆಯಿಂದ ಜರುಗುತ್ತಿದ್ದು, ಈ ಬಾರಿ ವಿಶೇಷ ಎಂದರೆ ಲಕ್ಷ್ಮೀ ಪೂಜೆ ಮತ್ತು ನರಕ ಚತುರ್ದಶಿ ಎರಡು ಒಂದೇ ದಿನ ಬಂದ ಹಿನ್ನಲೆಯಲ್ಲಿ ಹಬ್ಬದ ಸಂಭ್ರಮ ಮತ್ತಷ್ಟು ರಂಗೇರಿದೆ. 
    ಮನೆಗಳಲ್ಲಿ ಸಂಪ್ರದಾಯದಂತೆ ಲಕ್ಷ್ಮೀ ಆರಾಧನೆ ಸಾಮಾನ್ಯವಾಗಿ ಕಂಡಬಂದರೆ, ದೊಡ್ಡ ದೊಡ್ಡ ಮಳಿಗೆಗಳಲ್ಲಿ, ಮಾಲ್‌ಗಳಲ್ಲಿ, ಪೆಟ್ರೋಲ್ ಬಂಕ್, ಚಿತ್ರಮಂದಿರ, ಹೋಟೆಲ್ ಹಾಗು ಸಣ್ಣಪುಟ್ಟ ಅಂಗಡಿಮುಂಗಟ್ಟುಗಳಲ್ಲಿ ಈ ಬಾರಿ ಲಕ್ಷ್ಮೀ ಆರಾಧನೆ ವಿಜೃಂಭಣೆಯಿಂದ ಜರುಗಿತು. ಬಹುತೇಕ ಮಂದಿ ಗುರುವಾರ ಲಕ್ಷ್ಮೀ ಆರಾಧನೆ ನೆರವೇರಿಸಿದರೇ, ಕೆಲವು ಶುಕ್ರವಾರ ಆರಾಧಿಸಿದರು. 
    ಎಲ್ಲೆಡೆ ವಾಣಿಜ್ಯ ರಸ್ತೆಗಳಲ್ಲಿ ವಿದ್ಯುತ್ ದೀಪಾಂಲಕಾರ ಕಂಗೊಳಿಸಿದ್ದು, ಈ ನಡುವೆ ಸರ್ಕಾರ ಪಟಾಕಿ ಮಾರಾಟ ಹಾಗು ಬಳಕೆಗೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ವಿಧಿಸಿದ್ದರು ಸಹ ಪಟಾಕಿ ಸದ್ದು ಈ ಬಾರಿ ಸಹ ಮಾಮೂಲಿಯಾಗಿ ಕಂಡು ಬಂದಿತು. 
    ಮನೆಗಳಲ್ಲಿ ಬಣ್ಣ ಬಣ್ಣದ ಹೊಸ ಬಟ್ಟೆ ಧರಿಸಿ ಕುಟುಂಬಸ್ಥರು, ನೆರೆಹೊರೆಯವರೊಂದಿಗೆ ಸಂಭ್ರಮಿಸುವ ಜೊತೆಗೆ ಹಬ್ಬದ ಸಾಂಪ್ರದಾಯಕ  ಆಚರಣೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ನಡೆದಿರುವಂತೆ ಕಂಡು ಬಂದಿತು. 
ಬೆಲೆ ಏರಿಕೆಗೂ ಕಡಿಮೆಯಾಗದ ಸಂಭ್ರಮ : 
    ಹೂ, ಹಣ್ಣು, ತರಕಾರಿ, ದಿನಸಿ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡೆವೆಯೂ ಹಬ್ಬದ ಸಂಭ್ರಮ ಕಂಡು ಬಂದಿತು. ವ್ಯಾಪಾರಸ್ಥರು ಕೇಳಿದಷ್ಟು ಹಣ ನೀಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು. ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಜನಸಂದಣಿ ಕಂಡು ಬಂದಿತು. 

No comments:

Post a Comment