Friday, December 20, 2024

ಬಾಯ್ಲರ್ ಸ್ಪೋಟ ಪ್ರಕರಣ : ಅಪರೇಟರ್ ಸಾವು

ಭದ್ರಾವತಿ ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟ ಪ್ರಕರಣದಲ್ಲಿ ರೈಸ್ ಮಿಲ್ ಬಾಯ್ಲರ್ ಆಪರೇಟರ್, ಹೊಸಮನೆ ನಿವಾಸಿ ರಘುನಾಥ್ ರಾವ್ ಸಾಳಂಕೆ(೪೮) ಮೃತಪಟ್ಟಿದ್ದಾರೆ. 
    ಭದ್ರಾವತಿ: ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟ ಪ್ರಕರಣದಲ್ಲಿ ರೈಸ್ ಮಿಲ್ ಬಾಯ್ಲರ್ ಆಪರೇಟರ್, ಹೊಸಮನೆ ನಿವಾಸಿ ರಘುನಾಥ್ ರಾವ್ ಸಾಳಂಕೆ(೪೮) ಮೃತಪಟ್ಟಿದ್ದಾರೆ. 
    ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಇದ್ದಾರೆ. ಬಾಯ್ಲರ್ ಸ್ಪೋಟಗೊಂಡ ಸಂದರ್ಭದಲ್ಲಿ ರಘುನಾಥ್ ರಾವ್ ಸಾಳಂಕೆ ಕಣ್ಮರೆಯಾಗಿದ್ದರು. ಇವರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದು, ಮಧ್ಯ ರಾತ್ರಿ ಸುಮಾರು ೧.೩೦ರ ಸಮಯದಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ದೇಹ ಗುರುತಿಸಲಾಗದಷ್ಟು ಸ್ಥಿತಿಯಲ್ಲಿ ಸಿಕ್ಕಿದ್ದು, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 
    ಕ್ಷತ್ರಿಯ ಮರಾಠ ಸೇವಾ ಸಂಘ ಸಂತಾಪ : 
    ರಘುನಾಥ್ ರಾವ್ ಸಾಳಂಕೆ ನಿಧನಕ್ಕೆ ಕ್ಷತ್ರಿಯ ಮರಾಠ ಸೇವಾ ಸಂಘ ಸಂತಾಪ ಸೂಚಿಸಿದ್ದು, ಸಿ.ಎನ್ ರಸ್ತೆಯಲ್ಲಿರುವ ಸಂಘದ ಕಛೇರಿಯಲ್ಲಿ ಬೆಳಿಗ್ಗೆ ಸಂಘದ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಹಾಗು ಮರಾಠ ಸಮಾಜದ ಮುಖಂಡರು, ಸಮಾಜ ಬಾಂಧವರು ಸೇರಿ ಸಂತಾಪ ಸೂಚಿಸಿದರು. 
    ೩೦ ಲಕ್ಷ ರು. ಪರಿಹಾರ : 
    ಕ್ಷತ್ರಿಯ ಮರಾಠ ಸೇವಾ ಸಂಘದ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರರಾದ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಉದ್ಯಮಿ ಬಿ.ಕೆ ಶಿವಕುಮಾರ್ ಹಾಗು ವರ್ತಕರ ಸಂಘದ ಪ್ರಮುಖರ ನೇತೃತ್ವದಲ್ಲಿ ಸಭೆ ನಡೆದು ಸಮಾಜ ಭಾಂಧವರ ಸಮ್ಮುಖದಲ್ಲಿ ಮೃತ ರಘುನಾಥ್ ರಾವ್ ಸಾಳಂಕೆಯವರ ಕುಟುಂಬಕ್ಕೆ ೩೦ ಲಕ್ಷ ರು. ಪರಿಹಾರ ಹಣ ವಿತರಿಸಲಾಯಿತು. 
    ರಘುನಾಥ್ ರಾವ್ ಸಾಳಂಕೆ : 
    ಹೊಸಮನೆ ವಾರ್ಡ್ ನಂ.೧೨ರ ಎನ್.ಎಂ.ಸಿ ೫ನೇ ಕ್ರಾಸ್ ನಿವಾಸಿ ರಘುನಾಥ್ ರಾವ್ ಸಾಳಂಕೆ ಹಲವಾರು ವರ್ಷಗಳಿಂದ ಗಣೇರ್ಶ ರೈಸ್ ಮಿಲ್‌ನಲ್ಲಿ ಬಾಯ್ಲರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದು, ಇದೀಗ ಇವರ ನಿಧನದಿಂದ ಪತ್ನಿ, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.  
    ಗುರುವಾರ ರೈಸ್‌ಮಿಲ್‌ನಲ್ಲಿ ಇವರು ಸೇರಿದಂತೆ ಒಟ್ಟು ೬ ಜನ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಪೈಕಿ ೫ ಜನರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲದೆ ಘಟನೆಯಲ್ಲಿ ಪಾದಚಾರಿಯೊಬ್ಬರು ಗಾಯಗೊಂಡಿದ್ದು, ಅವರು ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ. 

No comments:

Post a Comment