ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ : ಮತ್ತೊಂದು ದೂರು
ಅಪಘಾತ ಪ್ರಕರಣವನ್ನು ಸರಿಯಾಗಿ ದಾಖಲಿಸಿಕೊಳ್ಳದೆ ದೂರು ನೀಡಿರುವವರ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಭದ್ರಾವತಿ ತಾಲೂಕಿನ ಗೌಡರಹಳ್ಳಿ ನಿವಾಸಿಗಳು ಭಾನುವಾರ ಸಂಜೆ ಏಕಾಏಕಿ ಸಂಚಾರಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಭದ್ರಾವತಿ: ಅಪಘಾತ ಪ್ರಕರಣವನ್ನು ಸರಿಯಾಗಿ ದಾಖಲಿಸಿಕೊಳ್ಳದೆ ದೂರು ನೀಡಿರುವವರ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ತಾಲೂಕಿನ ಗೌಡರಹಳ್ಳಿ ನಿವಾಸಿಗಳು ಭಾನುವಾರ ಸಂಜೆ ಏಕಾಏಕಿ ಸಂಚಾರಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ತಾಲೂಕಿನ ಗೌಡರಹಳ್ಳಿ ನಿವಾಸಿ, ತರಕಾರಿ ವ್ಯಾಪಾರಿ ಸೈಯದ್ ಫಸಲ್ ಇವರ ತಂದೆ ಸೈಯದ್ ಇಬ್ರಾಹಿಂ ಅವರೊಂದಿಗೆ ತಮ್ಮ ಹೋಂಡಾ ಆಕ್ಟೀವಾ ದ್ವಿಚಕ್ರವಾಹನದಲ್ಲಿ ನ.೨ರಂದು ತರಕಾರಿ ತರಲು ನಗರಕ್ಕೆ ತೆರಳಿದ್ದು, ಪುನಃ ಹಿಂದಿರುಗಿ ಗ್ರಾಮಕ್ಕೆ ಬರುವಾಗ ಮಧ್ಯಾಹ್ನ ಸುಮಾರು ೧.೨೦ರ ಸಮಯದಲ್ಲಿ ಅಪಘಾತವಾಗಿದೆ. ಇಬ್ರಾಹಿಂ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಇವರನ್ನು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಇಬ್ರಾಹಿಂ ಅವರ ಪತ್ನಿ ಜರೀನಾ ಬಿರವರು ನ.೭ರಂದು ಘಟನೆ ಸಂದರ್ಭದಲ್ಲಿ ಪೋನ್ ಮಾಡಿ ಅಪಘಾತ ಕುರಿತು ಮಾಹಿತಿ ನೀಡಿದ್ದಪರಿಚಯಸ್ಥರ ಮಾಹಿತಿಯನ್ನು ಆಧರಿಸಿ, ನನ್ನ ಮಗ ಫಸಲ್ ದ್ವಿಚಕ್ರವಾಹನ ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ನಾಯಿಯೊಂದು ಅಡ್ಡ ಬಂದಿದ್ದು, ಇದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು ಅಪಘಾತ ಸಂಭವಿಸಿದೆ ಎಂದು ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಆದರೆ ಇದೀಗ ಠಾಣೆ ಮುಂದೆ ಜಮಾಯಿಸಿದ್ದ ನಿವಾಸಿಗಳು ದ್ವಿಚಕ್ರವಾಹನ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿಲ್ಲ. ಯಾವುದೋ ವಾಹನ ಡಿಕ್ಕಿ ಪರಿಣಾಮ ಅಪಘಾತ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಪಘಾತ ಘಟನೆಗೆ ಸಂಬಂಧಿಸಿದ ದೃಶ್ಯ ಸಾಕ್ಷಿಯಾಗಿದ್ದು, ಇದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳದೆ ವಿನಾಕಾರಣ ದೂರು ನೀಡಿದವರ ವಿರುದ್ಧವೇ ಪ್ರಕರಣ ದಾಖಲಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ತಕ್ಷಣ ದಾಖಲಾಗಿರುವ ದೂರು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಸಂಚಾರಿ ಠಾಣೆ ಉಪ ನಿರೀಕ್ಷಕಿ ಶಾಂತಲ ಅವರೊಂದಿಗೆ ಸುಮಾರು ೨ ಗಂಟೆಗೂ ಹೆಚ್ಚು ಸಮಯ ಮಾತಿನ ಚಕಮಕಿ ನಡೆಸಿ ಅಂತಿಮವಾಗಿ ಹೊಸದಾಗಿ ದೂರು ದಾಖಲಿಸಿ ಅದರ ಅನ್ವಯದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು. ಈ ಹಿನ್ನಲೆಯಲ್ಲಿ ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೊಸದಾಗಿ ದೂರು ನೀಡಲಾಯಿತು.
No comments:
Post a Comment