Monday, December 30, 2024

ಲೋಕಾಯುಕ್ತಕ್ಕೆ ೯ಕ್ಕೂ ಹೆಚ್ಚು ದೂರು ಸಲ್ಲಿಕೆ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಸೋಮವಾರ ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಯಿತು. 
    ಭದ್ರಾವತಿ: ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಇಲಾಖೆಗೆ ಸೋಮವಾರ ಸುಮಾರು ೯ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾದವು. 
    ನಗರಸಭೆ ಸಭಾಂಗಣದಲ್ಲಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದು ಕೊರತೆಗಳ ಸಭೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ನಿರೀಕ್ಷಕ ವೀರಬಸಪ್ಪರವರಿಗೆ ತಾಲೂಕು ಆಡಳಿತ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ವಿರುದ್ಧ ದೂರುಗಳು ಸಲ್ಲಿಕೆಯಾದವು. 
    ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ದೂರು ಸಲ್ಲಿಸಿ, ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೨೮ ಕೋ.ರು ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಫುಟ್‌ಪಾತ್ ಕಾಮಗಾರಿ ವಿಳಂಬವಾಗಿದ್ದು, ಅಲ್ಲದೆ ಕಳಪೆ ಗುಣಮಟ್ಟದಿಂದ ಕೂಡಿದೆ ಇದರ ಕ್ರಮ ಕೈಗೊಳ್ಳುವಂತೆ ಹಾಗು ನಗರದಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಇದರ ವಿರುದ್ಧ ಸಹ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. 
    ಸಾಮಾಜಿಕ ಹೋರಾಟಗಾರ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ ಶಶಿಕುಮಾರ್ ಗೌಡ, ಶಿಕ್ಷಕನೋರ್ವನ ಅಸಭ್ಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಶಾಲೆಯೊಂದರ ವಿರುದ್ಧ  ಕ್ರಮ ಕೈಗೊಳ್ಳುವಂತೆ ಹಾಗು ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಡೊನೇಷನ್ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. 
    ಪ್ರಗತಿಪರ ಸಂಘಟನೆಗಳ ಮುಖಂಡ ಸುರೇಶ್ ದೂರು ಸಲ್ಲಿಸಿ, ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾಮಗಾರಿಗಳ ಸ್ಥಳದಲ್ಲಿ ಕರ್ನಾಟಕ ಪಾರದರ್ಶಕ ೨೦೧೬ರ ಕಾಯ್ದೆಯಡಿ ಕಾಮಗಾರಿ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 
    ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್‌ರವರು ದೂರು ಸಲ್ಲಿಸಿ, ತಮಗೆ ಸೇರಿದ ನಗರದ ಜೇಡಿಕಟ್ಟೆಯಲ್ಲಿರುವ ನಿವೇಶನದ ಜಾಗದ ಅಳತೆಯಲ್ಲಿ ೧೦ ಅಡಿ ಜಾಗ ವಂಚನೆಯಾಗಿದ್ದು, ಇದಕ್ಕೆ ಕಾರಣಕರ್ತರಾಗಿರುವ ಸರ್ವೇಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  
    ಉಜ್ಜನಿಪುರ ನಗರಸಭೆ ವಾರ್ಡ್ ೨೨ವ್ಯಾಪ್ತಿಯಲ್ಲಿ ಸುಮಾರು ೩೦೦೦ ಆಶ್ರಯ ಮನೆಗಳಿಗಿದ್ದು, ಈ ಭಾಗದ ಗೊಂದಿ ನಾಲೆಯಲ್ಲಿ ಹರಿಯುತ್ತಿರುವ ನೀರಿಗೆ ತ್ಯಾಜ್ಯ ಎಸೆಯಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ರವಿಕುಮಾರ್ ಎಂಬುವರು ದೂರು ಸಲ್ಲಿಸಿ ಮನವಿ ಮಾಡಿದ್ದಾರೆ. 
    ಉಳಿದಂತೆ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಇದರಿಂದಾಗಿ ಕಳೆದ ೩ ವರ್ಷಗಳಿಂದ ರಥೋತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿವಾಸಿಗಳು ಹಾಗು ಭಕ್ತರು ನಿರಾಸೆಗೊಂಡಿದ್ದು, ತಕ್ಷಣ ನಗರಸಭೆ ಆಡಳಿತ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ನ್ಯಾಯವಾದಿ ಸುಧೀಂದ್ರ ಮಾತನಾಡಿ, ನಗರದ ಪ್ರಮುಖ ವಾಣಿಜ್ಯ ರಸ್ತೆಯೊಂದರಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ ಮಾಲೀಕರು ಚರಂಡಿಗೆ ಮೀಸಲಿಟ್ಟಿರುವ ಜಾಗವನ್ನು ಅತಿಕ್ರಮಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. 
    ಒಟ್ಟಾರೆ ೯ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾದವು. ಸಭೆಯಲ್ಲಿ ಉಪತಹಸೀಲ್ದಾರ್ ಮಂಜ್ಯಾನಾಯ್ಕ, ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ತಾಲೂಕು ಕಂದಾಯ ಇಲಾಖೆ, ನಗರಸಭೆ ಹಾಗು ಇನ್ನಿತರ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. 

No comments:

Post a Comment