Monday, December 30, 2024

ಪ್ರಸ್ತುತ ರಾಜಕಾರಣದಲ್ಲಿ ಪಾಳೇಗಾರಿಕೆ ಸಂಸ್ಕೃತಿ : ಜಿ.ಬಿ ವಿನಯ್ ಕುಮಾರ್

ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಭದ್ರಾವತಿ ನಗರದ ಬಿ.ಎಚ್ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ವಿಶೇಷ ಸನ್ಮಾನಿತರಾಗಿ ಮಾತನಾಡಿದರು. 
    ಭದ್ರಾವತಿ : ಇಂದು ರಾಜಕಾರಣದಲ್ಲಿ ಪಾಳೇಗಾರಿಕೆ ಸಂಸ್ಕೃತಿ ವಿಜೃಂಭಿಸುತ್ತಿದ್ದು, ಎಲ್ಲೆಡೆ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಗಂಡ, ಹೆಂಡತಿ, ಮಕ್ಕಳು, ಸೊಸೆ, ಮೊಮ್ಮಕ್ಕಳು ರಾಜಕಾರಣದಲ್ಲಿದ್ದು, ಕುಟುಂಬದ ಅಧಿಕಾರ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಈ ವ್ಯವಸ್ಥೆ ತೊಡೆದು ಹಾಕಲು ಎಲ್ಲಾ ಸಮಾಜದವರು ಬೆಂಬಲ ನೀಡಬೇಕು ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದರು.
    ನಗರದ ಬಿ.ಎಚ್ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ವಿಶೇಷ ಸನ್ಮಾನಿತರಾಗಿ ಮಾತನಾಡಿದ ಅವರು, ಗುಲಾಮಗಿರಿ ಬಿಟ್ಟು ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ ಹೋರಾಡಬೇಕಿದೆ ಎಂದರು. 
    ಪ್ರತಿಷ್ಠೆಗೋಸ್ಕರ ಜನಪ್ರತಿನಿಧಿಗಳಾಗುತ್ತಿದ್ದಾರೆ. ಜನಸೇವೆಗೆಂದು ಬರುತ್ತಿಲ್ಲ. ಕುರುಬರು ಕುರಿ ಕಾಯಬೇಕು, ಮಡಿವಾಳರು ಬಟ್ಟೆ ಸ್ವಚ್ಚಗೊಳಿಸಬೇಕು ಎಂಬಂತೆ ಹಿಂದುಳಿದ ವರ್ಗದ ಜನರು ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ಕಾಯಕ ಮುಂದುವರಿಸಿಕೊಂಡು ಹೋಗಬೇಕೆಂದು ರಾಜಕೀಯ ನೇತಾರರು ಅಂದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಂಭೀರ ಚಿಂತನೆ ನಡೆಸಬೇಕಾದ ಅವಶ್ಯಕತೆ ಇದೆ ಎಂದರು.
    ಕುರುಬ ಸಮಾಜದವರು ರಾಜ್ಯದಲ್ಲಿ ೬೫ ಲಕ್ಷದಷ್ಟಿದ್ದಾರೆ. ಆದರೆ ಶಾಸಕರಿರುವುದು ಕೇವಲ ೧೨ ಮಂದಿ ಮಾತ್ರ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಎಂದರೂ ಸಮಾಜದ ೩೦ ಶಾಸಕರು ವಿಧಾನಸೌಧಕ್ಕೆ ಆರಿಸಿ ಹೋಗಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದರು.
    ಹೊಸದುರ್ಗದ ಶ್ರೀ ಕಾಗಿನೆಲೆ ಕನಕ ಗುರುಪೀಠ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ. ಸಂತೋಷ್ ಅಧ್ಯಕ್ಷತೆ ವಹಿಸಿದ್ದರು.
    ವೇದಿಕೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಉದ್ಯಮಿ ಸಿ.ಮಹೇಶ್‌ಕುಮಾರ್, ಸಮಾಜದ ಮುಖಂಡರುಗಳಾದ ಕರಿಯಪ್ಪ, ಡಾ. ಡಿ. ಪ್ರಭಾಕರ ಬೀರಯ್ಯ, ಡಾ. ಎಚ್. ಆರ್.ನರೇಂದ್ರ, ರಾಕೇಶ್, ಹೇಮಾವತಿ, ವೈ.ರೇಣುಕಮ್ಮ, ಬಿ.ಎಚ್ ವಸಂತ, ಬಿ.ಎಸ್ ನಾಗರಾಜ್, ಬಿ.ಎಸ್.ಗೋಪಾಲ್, ಎಚ್. ರವಿಕುಮಾರ್, ಎನ್.ಸತೀಶ್, ವಿನೋದ್‌ಕುಮಾರ್, ಸಣ್ಣಯ್ಯ, ಕೇಶವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 

No comments:

Post a Comment