ಭದ್ರಾವತಿ ನಗರದ ಚನ್ನಗಿರಿ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ಬಾಯ್ಲರ್ ಸ್ಪೋಟವಾಗಿರುವ ಘಟನೆ ನಡೆದಿದೆ. ಸ್ಪೋಟದಿಂದ ರೈಸ್ ಮಿಲ್ ಬಹುತೇಕ ಜಖಂಗೊಂಡಿದೆ.
ಭದ್ರಾವತಿ: ನಗರದ ಚನ್ನಗಿರಿ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ಬಾಯ್ಲರ್ ಸ್ಪೋಟವಾಗಿದ್ದು, ಸುಮಾರು ೭ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ರೈಸ್ ಮಿಲ್‌ನಲ್ಲಿ ಸಂಜೆ ಏಕಾಏಕಿ ಬಾಯ್ಲರ್ ಸ್ಪೋಟಗೊಂಡಿದೆ. ಇದರಿಂದಾಗಿ ರೈಸ್‌ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ೭ ಮಂದಿ ತೀವ್ರ ಗಾಯಗೊಂಡಿದ್ದು, ಗಾಯಾಳುಗಳಿಗೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ರೈಸ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ರಘು ಎಂಬಾತ ನಾಪತ್ತೆಯಾಗಿದ್ದು, ತೀವ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಬಾಯ್ಲರ್ ಸ್ಪೋಟದಿಂದ ರೈಸ್ ಮಿಲ್ ಕಟ್ಟಡ ಹಾಗು ಮೇಲ್ಛಾವಣೆ ಬಹುತೇಕ ಜಖಂಗೊಂಡಿದ್ದು, ಅಲ್ಲದೆ ರೈಸ್ ಮಿಲ್ ಸಮೀಪದ ಅಣ್ಣಾನಗರ ಹಾಗು ಹೊಸಮನೆ ಭಾಗದ ಕೆಲವು ಮನೆಗಳಿಗೂ ಹಾನಿ ಉಂಟಾಗಿದೆ. ಸ್ಪೋಟದ ತೀವ್ರತೆ ಹೆಚ್ಚಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿದೆ.
ಘಟನೆಯಲ್ಲಿ ಒಟ್ಟು ೭ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಘು ಎಂಬಾತ ಕಾಣೆಯಾಗಿದ್ದು, ಈತನಿಗಾಗಿ ಶೋಧ ಕಾರ್ಯ ನಡೆದಿದೆ. ಪೊಲೀಸ್, ಅಗ್ನಿಶಾಮಕ ದಳ, ಅಂಬ್ಯುಲೆನ್ಸ್, ಮೆಸ್ಕಾಂ, ನಗರಸಭೆ ಹಾಗು ಇನ್ನಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ. ಆಸ್ತಿ ಹಾನಿ ಸಂಭವಿಸಿದೆ. ಆದರೆ ಯಾವುದೇ ಗಂಭೀರ ಪ್ರಾಣಹಾನಿ ಸಂಭವಿಸಿಲ್ಲ.
- ಜಿ.ಕೆ ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ, ಶಿವಮೊಗ್ಗ
ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ, ಮೆಸ್ಕಾಂ ಮತ್ತು ನಗರಸಭೆ ಸಿಬ್ಬಂದಿಗಳು ಹಾಗು ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೂ ಯಾವುದೇ ಪ್ರಾಣಹಾನಿಯಾಗಿರುವ ಕುರಿತು ಮಾಹಿತಿ ತಿಳಿದು ಬಂದಿಲ್ಲ.
ಈ ಭಾಗದ ವಿದ್ಯುತ್ ಕಡಿತಗೊಳಿಸಲಾಗಿದ್ದು, ಅಲ್ಲದೆ ಘಟನಾ ಸ್ಥಳಕ್ಕೆ ಸುತ್ತಮುತ್ತಲಿನಿಂದ ಜನರು ಜಮಾಯಿಸುತ್ತಿದ್ದು, ಕಾರ್ಯಾಚರಣೆ ತೊಂದರೆಯಾಗುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಯಾಗಿ ಈ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
No comments:
Post a Comment