Wednesday, December 25, 2024

ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಆಚರಣೆ

ಭಾರತರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೦ನೇ ವರ್ಷದ ಜನ್ಮಶತಮಾನೋತ್ಸವ, ಸುಶಾಸನ ದಿನ ಪ್ರಯುಕ್ತ ಭದ್ರಾವತಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಬುಧವಾರ ಶತದೀಪೋತ್ಸವ ಆಚರಿಸಲಾಯಿತು. 
    ಭದ್ರಾವತಿ :  ಭಾರತರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೦ನೇ ವರ್ಷದ ಜನ್ಮಶತಮಾನೋತ್ಸವ, ಸುಶಾಸನ ದಿನ ಪ್ರಯುಕ್ತ ತಾಲೂಕು ಬಿಜೆಪಿ ಮಂಡಲ ವತಿಯಿಂದ ಬುಧವಾರ ಶತದೀಪೋತ್ಸವ ಆಚರಿಸಲಾಯಿತು. 
    ನಗರದ ಮಂಡಲದ ಕಾರ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವ ವಹಿಸಿದ್ದರು. ಕಾರ್ಯಾಲಯದ ಆವರಣ  ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ಕಾರ್ಯಕರ್ತರು ಶತ ದೀಪಗಳನ್ನು ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.
    ಪಕ್ಷದ ಮುಖಂಡರಾದ ಕೆ.ಎನ್ ಶ್ರೀಹರ್ಷ ಮಾತನಾಡಿ, ಕವಿ ಹೃದಯದ ಅಟಲ್ ಜೀ ಅವರಿಗೂ ಭದ್ರಾವತಿ ನಗರಕ್ಕೂ ಅವಿನಾಭಾವ ಸಂಬಂಧವಿದೆ. ೧೯೮೪ರ ಲೋಕಸಭಾ ಚುನಾವಣೆಯಲ್ಲಿ ಗ್ವಾಲಿಯರ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಾಜಪೇಯಿ ಸೋಲು ಕಂಡಿದ್ದರು, ಇದರಿಂದ ನೊಂದ ಸಿದ್ದಾಪುರ ಲಕ್ಷ್ಮೀನಾರಾಯಣ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದ ವಾಜಪೇಯಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದಾದ ನಂತರ ಈ ಜಿಲ್ಲೆಗೆ ಬಂದಾಗಲೆಲ್ಲ ಲಕ್ಷ್ಮೀನಾರಾಯಣನನ್ನು ನೆನೆಯುತ್ತಿದ್ದರು. ಅಟಲ್ ಜೀ ಕಡೆಯದಾಗಿ ೧೯೯೩ರಲ್ಲಿ ಕನಕಮಂಟಪಕ್ಕೆ ಬಂದು ಭಾಷಣ ಮಾಡುವ ವೇಳೆ ಮಳೆ ಹೆಚ್ಚಾಗಿದ್ದರಿಂದ ಭಾಷಣ ಮೊಟಕು ಮಾಡಿ ಪುನಃ ಬರುತ್ತೇನೆ ಎಂದು ಹೇಳಿ ಹೋದವರು ಬರಲೇ ಇಲ್ಲ ಎಂದು ಅಟಲ್ ಜೀ ಅವರನ್ನು ನೆನಪು ಮಾಡಿದರು. 
    ರಾಷ್ಟ್ರದ ಅಭಿವೃದ್ಧಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಆಡಳಿತದಲ್ಲಿ ದೇಶದ ಪ್ರಗತಿಗೆ ಹೊಸ ದಾರಿ ಕೊಂಡುಕೊಳ್ಳುವ ಜೊತೆಗೆ ವಿದೇಶಾಂಗ ನೀತಿಯಲ್ಲಿ ಹೊಸ ದಿಕ್ಕು ಕಾಣಲಾಯಿತು. ರಾಷ್ಟ್ರದ ಸಮಸ್ಯೆಗಳಿಗೆ ಸೂಕ್ತ ದೂರದೃಷ್ಟಿಯ ನಿವಾರಣೆ ಕಂಡವರು. ಅವರ ದರ್ಶನ ಭಾಗ್ಯ ಪಡೆದ ನಾವೇ ಪುಣ್ಯವಂತರು ಎಂದರು. 
    ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಸುಶಾಸನ ದಿನ ಕಾರ್ಯಕ್ರಮದ ಸಂಚಾಲಕ ಡಿ.ಆರ್ ಸಾಗರ್,  ಸಹ ಸಂಚಾಲಕ ಕಲ್ಲೇಶ್, ಎಂ. ಮಂಜುನಾಥ್, ಪ್ರಮುಖರಾದ ಬಿ.ಜಿ ರಾಮಲಿಂಗಯ್ಯ, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ರಾಜಶೇಖರ್, ಧನುಷ್ ಬೋಸ್ಲೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸನ್ನ ಕುಮಾರ್ ಬಾರಂದೂರು, ಸಚ್ಚಿದಾನಂದ, ಉಮಾವತಿ, ಲೋಲಾಕ್ಷಿ, ಜಯಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment