ಜ.೨೬ರಂದು ಡಿವೈಎಸ್ಪಿ ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹ : ಬಿ.ಎನ್ ರಾಜು
ಭದ್ರಾವತಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು.
ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಪ್ರತಿಷ್ಠಾಪಿಸಲಾಗಿರುವ ನೂತನ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಜೊತೆಗೆ ಮುಕ್ತಾಯ ಹಂತದಲ್ಲಿರುವ ಅಂಬೇಡ್ಕರ್ ಭವನ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಉದ್ಘಾಟಿಸಬೇಕೆಂದು ಹಾಗು ಸಮಾಜವಾದಿ ನಾಯಕ, ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪನವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಗ್ರಹಿಸಿದರು.
ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್‌ರವರು ೩೬ ಪದವಿ ಪಡೆದ ಪ್ರಪಂಚದಲ್ಲಿಯೇ ಮಹಾಜ್ಞಾನಿಯಾಗಿದ್ದಾರೆ. ಅಲ್ಲದೆ ಪ್ರಪಂಚದ ವಿವಿಧ ದೇಶಗಳಲ್ಲಿ ಅತಿ ಹೆಚ್ಚು ಗೌರವಕ್ಕೆ ಪಾತ್ರರಾಗಿದ್ದು, ದಲಿತ ಚಳುವಳಿಗಳು ಹುಟ್ಟಿದ ನಗರದಲ್ಲಿ ಇವರ ಹೆಸರಿನಲ್ಲಿ ಸುಸಜ್ಜಿತವಾದ ಭವನ ನಿರ್ಮಿಸಬೇಕೆಂದು ಕಳೆದ ಸುಮಾರು ೩೦ ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದ ಪರಿಣಾಮ ೨೦೧೮ರಲ್ಲಿ ಭವನದ ಕಾಮಗಾರಿ ಆರಂಭಿಸಿದ್ದು, ಆದರೆ ಇದುವರೆಗೂ ಕಾಮಗಾರಿಯನ್ನು ಪೂರೈಸದೆ ನಿರ್ಲಕ್ಷ್ಯವಹಿಸಿರುವುದು ಖಂಡನೀಯ ಎಂದರು.
ನಗರಸಭೆ ಸಭಾಂಗಣದಲ್ಲಿ ಜ.೨೧ರಂದು ನಡೆದ ಸಭೆಯಲ್ಲಿ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಪ್ರತಿಷ್ಠಾಪಿಸಲಾಗಿರುವ ನೂತನ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಮುಂದಿನ ೧ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಆಹ್ವಾನಿಸಿ ನೆರವೇರಿಸುವಂತೆ ಸಂಘ-ಸಂಸ್ಥೆಗಳ ಮುಖಂಡರು ಒತ್ತಾಯಿಸಿದ ಮೇರೆಗೆ ಶಾಸಕರು ಒಪ್ಪಿಗೆ ಸೂಚಿಸಿದ್ದು, ಇದೆ ಸಂದಭದಲ್ಲಿ ಅಂಬೇಡ್ಕರ್ ಭವನ ಕಾಮಗಾರಿಯನ್ನು ತ್ವರಿತವಾಗಿ ಕೈಗೊಂಡು ಪ್ರತಿಮೆ ಉದ್ಘಾಟನೆ ಜೊತೆಗೆ ಭವನ ಸಹ ಉದ್ಘಾಟಿಸಬೇಕೆಂದು ಆಗ್ರಹಿಸಿದರು.
ಕಾಗೋಡು ತಿಮ್ಮಪ್ಪರಿಗೆ ಭಾರತರತ್ನ ನೀಡಲಿ:
ದೇಶಕಂಡ ಅತ್ಯುತ್ತಮ ರಾಜಕಾರಣಿ, ಸಮಾಜವಾದಿ ಮತ್ತು ಕಾಗೋಡು ಚಳುವಳಿ ನಾಯಕ ಕಾಗೋಡು ತಿಮ್ಮಪ್ಪನವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದರು.
೯೪ಸಿ ಮತ್ತು ೯೪ಸಿಸಿ ಯೋಜನೆಯಲ್ಲಿ ಬಡವರಿಗೆ ನಿವೇಶನಗಳ ರೂವಾರಿ, ಬಗರ್‌ಹುಕುಂ ಮತ್ತು ಅರಣ್ಯ ಜಮೀನುಗಳ ಲಕ್ಷಾಂತರ ಬಡವರಿಗೆ ಆಶ್ರಯದಾತ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಮತ್ತು ಇತರೆ ಇಲಾಖೆಗಳನ್ನು ಪ್ರಮಾಣಿಕವಾಗಿ ನಡೆಸಿದ ಪ್ರಜ್ಞಾವಂತ ರಾಜಕಾರಣಿ ಕಾಗೋಡುತಿಮ್ಮಪ್ಪ. ೨೦೧೩ರಲ್ಲಿ ಕರ್ನಾಟಕ ಸರ್ಕಾರದ ವಿಧಾನಸಭಾ ಅಧ್ಯಕ್ಷರಾಗಿ ದೇಶದಲ್ಲಿಯೇ ಕ್ರಾಂತಿಕಾರಿ ಸ್ಪೀಕರ್ ಎಂದು ಹೆಸರು ವಾಸಿಯಾದ ಸರಳ ಸಜ್ಜನಿಕೆಯ ಮಾನವೀಯ ಮೌಲ್ಯದ ನುರಿತ ರಾಜಕಾರಣಿ ಕಾಗೋಡು ತಿಮ್ಮಪ್ಪ. ಇವರಿಗೆ ಕುವೆಂಪು ವಿಶ್ವವಿದ್ಯಾಲಯ ಹಾಗು ಕೆಳದಿ ಶಿವಪ್ಪನಾಯ್ಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿವೆ. ಈ ಹಿನ್ನಲೆಯಲ್ಲಿ ಈ ಎರಡು ವಿಶ್ವವಿದ್ಯಾಲಯಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಾಗೋಡು ತಿಮ್ಮಪ್ಪರಿಗೆ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗಿದೆ. ಈ ನಡುವೆ ಸಂಸದ ಬಿ.ವೈ ರಾಘವೇಂದ್ರರವರು ಸಹ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಜಾತಿ ನಿಂದನೆ ಪ್ರಕರಣ ಡಿ.೨೬ರಂದು ಪ್ರತಿಭಟನೆ :
ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿನ ಪರಿಶಿಷ್ಟ ಜಾತಿಗೆ ಸೇರಿದವರ ಜಮೀನಿನಲ್ಲಿ ಅಕ್ರಮವಾಗ ಪ್ರವೇಶಿಸಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದ ಪೊಲೀಸ್ ಉಪಾಧೀಕ್ಷಕರ ನಿರ್ಲಕ್ಷ್ಯತನ ಹಾಗು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿರ್ಯೋವರ ದುರ್ವರ್ತನೆ ಖಂಡಿಸಿ ಕಛೇರಿ ಮುಂಭಾಗ ಜ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಗ್ರಾಮದ ಸರ್ವೆ ನಂ. ೩೭/೧, ೩೭/೬ರಲ್ಲಿ ೧ ಎಕರೆ ೨೦ ಗುಂಟೆ ಹೊಂದಿರುವ ಪರಿಶಿಷ್ಟ ಜಾತಿಗೆ ಸೇರಿದ ನಾಗರತ್ನಮ್ಮ ಎಂಬುವರ ಜಮೀನಿನಲ್ಲಿ ಮೇಲ್ಜಾತಿಗೆ ಸೇರಿದ ಒಂದು ಕುಟುಂಬಸ್ಥರು ವಿನಾಕಾರಣ ನಾಗರತ್ನಮ್ಮನವರ ಜಮೀನಿಗೆ ಅಕ್ರಮವಾಗಿ ಪ್ರದೇಶಿಸಿ ಜಾತಿ ನಿಂದನೆ ಕೊಲೆ ಬೆದರಿಕೆ ಹಾಕುತ್ತಿದ್ದು, ಈ ಸಂಬಂಧ ಅಗತ್ಯ ಸಾಕ್ಷಿ ಸಮೇತ ಒಟ್ಟು ೩ ಬಾರಿ ದೂರು ದಾಖಲಿಸಲಾಗಿದೆ. ಆದರೆ ಪೊಲೀಸರು ಸರಿಯಾಗಿ ಪ್ರಕರಣ ದಾಖಲಿಸಿಕೊಳ್ಳದೆ ದೂರುದಾರರ ವಿರುದ್ಧವಾಗಿ ವರ್ತಿಸುತ್ತಿದ್ದು, ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದೆ ತಪ್ಪಿತಸ್ಥರಿಗೆ ನೆರವಾಗುತ್ತಿದ್ದಾರೆಂದು ದೂರಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಪೊಲೀಸ್ ಉಪಾಧೀಕ್ಷಕರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವುದು ಖಂಡನೀಯ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪ್ರಮುಖರು ಹಾಗು ಲಕ್ಷ್ಮೀಪುರ ಗ್ರಾಮಸ್ಥರು ಉಪಸ್ಥಿತರಿದ್ದರು.
No comments:
Post a Comment