ಮೃತಪಟ್ಟಿರುವ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಾಂತಕುಮಾರ್
ಭದ್ರಾವತಿ: ಜಮೀನಿಗೆ ವಿದ್ಯುತ್ ಪರಿವರ್ತಕ(ಟ್ರಾನ್ಸ್ ಫಾರ್ಮಾರ್)ದಿಂದ ವಿದ್ಯುತ್ ಪೂರೈಸಿಕೊಳ್ಳುವ ವಿಚಾರದಲ್ಲಿ ಅಕ್ಕಪಕ್ಕದ ಜಮೀನಿನವರ ನಡುವೆ ಜಗಳ ನಡೆದು ವಿಕೋಪಕ್ಕೆ ತಿರುಗಿ ಹಲ್ಲೆ ನಡೆದಿರುವ ಪರಿಣಾಮ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನೋರ್ವ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ದೊಡ್ಡೇರಿ ಗ್ರಾಮದ ನಿವಾಸಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಾಂತಕುಮಾರ(೩೫) ಮೃತಪಟ್ಟಿರುವ ವ್ಯಕ್ತಿಯಾಗಿದ್ದು, ಘಟನೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಧುರವರ ಪತಿ ಲೇಪಾಕ್ಷಿ (೪೦), ಅತೀಶ್, ಅಭಿಲಾಷ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಇವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಇಬ್ಬರಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ೧೦ ಜನರ ವಿರುದ್ದ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಉಪಾಧೀಕ್ಷಕ ಕೆ.ಆರ್ ನಾಗರಾಜು, ಗ್ರಾಮಾಂತರ ಠಾಣೆ ನಿರೀಕ್ಷಕ ಜಗದೀಶ್ ಹಂಚಿನಾಳ್, ಪೇಪರ್‌ಟೌನ್ ಠಾಣೆ ನಿರೀಕ್ಷಕಿ ನಾಗಮ್ಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ವಿವರ:
ಮೃತಪಟ್ಟಿರುವ ಶಾಂತಕುಮಾರ್ ಹಾಗೂ ಲೇಪಾಕ್ಷಿ ಈ ಎರಡು ಕುಟುಂಬಸ್ಥರ ಜಮೀನು ಅಕ್ಕಪಕ್ಕದಲ್ಲಿವೆ. ಶಾಂತಕುಮಾರ್ ಅವರ ಜಮೀನಿನಲ್ಲಿ ವಿದ್ಯುತ್ ಪರಿವರ್ತಕವಿದ್ದು, ಈ ಪರಿವರ್ತಕದ ಮೂಲಕ ಲೇಪಾಕ್ಷಿ ಕುಟುಂಬದ ಜಮೀನಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಪರಿವರ್ತಕ ಹಾಳಾಗಿದ್ದು, ಈ ವಿಚಾರದಲ್ಲಿ ಸಂಜೆ ಜಮೀನಿನಲ್ಲಿಯೇ ಗಲಾಟೆಯಾಗಿದ್ದು, ಕೈ ಕೈ ಮಿಲಾವಣೆಯಾಗಿದೆ. ತದನಂತರ ಎಮ್ಮೆದೊಡ್ಡಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆ ಸಮೀಪ ಎರಡೂ ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಇದು ವಿಕೋಪಕ್ಕೆ ತಿರುಗಿ ಮಚ್ಚಿನಿಂದ ಶಾಂತಕುಮಾರ್ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಶಾಂತಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅಸುನೀಗಿದ್ದಾರೆ.
ತದನಂತರ ಲೇಪಾಕ್ಷಿ ಮನೆಗೆ ಬೆಂಕಿ ಹಚ್ಚಲು ಯತ್ನಿಸಲಾಗಿದೆ. ಮನೆಗೆ ಹೊತ್ತಿದ್ದ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಎರಡು ಬೈಕ್‌ಗಳನ್ನು ಜಖಂಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.
No comments:
Post a Comment