Friday, January 3, 2025

ಪ್ರತಿ ಶುಕ್ರವಾರ ಸಹಸ್ರಾರು ಭಕ್ತರಿಂದ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ಅಮ್ಮನವರ ದರ್ಶನ

 ಭದ್ರಾವತಿ ಬಿ.ಎಚ್ ರಸ್ತೆ, ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ.   
 * ಅನಂತಕುಮಾರ್ 
    ಭದ್ರಾವತಿ: ಪ್ರತಿಯೊಂದು ದೇವಾಲಯಕ್ಕೂ ಒಂದೊಂದು ರೀತಿಯ ವಿಶೇಷತೆ ಇರುತ್ತದೆ. ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾದಲ್ಲಿರುವ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಸಹ ಒಂದು ವಿಶೇಷತೆಯನ್ನು ಹೊಂದಿದೆ. ಪ್ರತಿ ದಿನ ನೂರಾರು ಭಕ್ತರು ಆಗಮಿಸುತ್ತಿದ್ದು, ಅಲ್ಲದೆ ಪ್ರತಿ ಶುಕ್ರವಾರ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನೆರವೇರಿಸಿಕೊಂಡು ಬರಲಾಗುತ್ತಿದೆ. 
    ಶಕ್ತಿ ದೇವತೆ ಆರಾಧನೆ ಪ್ರಾಚೀನ ಕಾಲದಿಂದಲೂ ನಡೆದು ಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಉದ್ಯೋಗ ನಿಮಿತ್ತ ನಗರಕ್ಕೆ ೧೯೮೭ರಲ್ಲಿ ಆಗಮಿಸಿದ ಶಿವರಾಮ ಮತ್ತು ಹೇಮಾ ದಂಪತಿ ಲೋಯರ್ ಹುತ್ತಾದಲ್ಲಿ ನೆಲೆಸಿ ಶ್ರದ್ಧಾ ಭಕ್ತಿಯಿಂದ ಶ್ರೀ ದೇವಿಯನ್ನು ಆರಾಧಿಸಿಕೊಂಡು ಬರುವ ಜೊತೆಗೆ ಸ್ಥಳೀಯ ಭಕ್ತರು ಹಾಗು ದಾನಿಗಳ ನೆರವಿನೊಂದಿಗೆ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿಕೊಂಡು ಬಂದ ಪರಿಣಾಮ ಒಂದು ಬೃಹತ್ ದೇವಸ್ಥಾನ ರೂಪುಕೊಳ್ಳಲು ಕಾರಣವಾಗಿದೆ ಎಂಬುದು ವಿಶೇಷ. 
    ಆರಂಭದಲ್ಲಿ ಶಿವರಾಮ ಮತ್ತು ಹೇಮಾರವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನವರಾತ್ರಿ ಉತ್ಸವ ಮತ್ತು ಪ್ರತಿ ಹುಣ್ಣಿಮೆಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡುವ ಮೂಲಕ ಸುತ್ತಮುತ್ತಲ ಜನರಲ್ಲಿ ಭಕ್ತಿ ಭಾವನೆ ಬೆಳೆಸುವಲ್ಲಿ ಯಶಸ್ವಿಯಾದರು. ಮೊದಲ ಬಾರಿಗೆ ೧೯೮೮ರಲ್ಲಿ ನವರಾತ್ರಿಯ ಸಪ್ತಮಿಯಂದು ಶ್ರೀ ಚಂಡಿಕಾಯಾಗ ಆರಂಭಿಸಲಾಯಿತು. ಕಳೆದ ೩೫ವರ್ಷಗಳಿಂದ ನಿರಂತರವಾಗಿ ಶ್ರೀ ಚಂಡಿಕಾಯಾಗ ನಡೆಸಿಕೊಂಡು ಬರುತ್ತಿರುವುದು ಈ ದೇವಸ್ಥಾನದ ಮತ್ತೊಂದು ಹೆಗ್ಗಳಿಕೆಯಾಗಿದೆ. 


ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ಅಮ್ಮನವರು
    ಭಕ್ತರ ಇಷ್ಟಾರ್ಥಗಳು ನೆರವೇರಿಸುವ ಶಕ್ತಿದೇವತೆಯ ಮಹಿಮೆಯಿಂದ ಈ ದೇವಸ್ಥಾನ ಸಹ ರೂಪುಗೊಂಡು ಜು.೩೧, ೧೯೯೪ರಲ್ಲಿ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿದೇವಿ ಮೂರ್ತಿ ಪ್ರತಿಷ್ಠಾಪನೆ ಸಹ ನೆರವೇರಿತು. ನಂತರ ದಿನಗಳಲ್ಲಿ ಶ್ರೀ ಗಣಪತಿ ಮತ್ತು ಶ್ರೀ ಸುಬ್ರಮಣ್ಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಪ್ರಸ್ತುತ ಈ ದೇವಸ್ಥಾನ ಬೃಹದಾಕಾರವಾಗಿ ಬೆಳೆದು ನಿಂತಿದೆ. 
    ಇದುವರೆಗೂ ಈ ದೇವಸ್ಥಾನದಲ್ಲಿ ೪ಕ್ಕೂ ಹೆಚ್ಚು ಬಾರಿ ಶತ ಚಂಡಿಕಾ ಯಾಗವನ್ನು ನಡೆಸಲಾಗಿದೆ. ವರ್ಷದಿಂದ ವರ್ಷಕ್ಕೆ ಉತ್ಸವ ಸೇರಿದಂತೆ ಧಾರ್ಮಿಕ ಆಚರಣೆಗಳು ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಪ್ರತಿ ಶುಕ್ರವಾರ ಅನ್ನ ದಾಸೋಹ ನಡೆಸಲಾಗುತ್ತಿದೆ. ಅಲ್ಲದೆ ಪ್ರತಿವರ್ಷ ಕುಂಭಾಭಿಷೇಕ, ಧನುರ್ಮಾಸದಲ್ಲಿ ಲಕ್ಷ ಪುಷ್ಪಾರ್ಚನೆ, ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಸುಬ್ರಹ್ಮಣ್ಯ ಷಷ್ಠಿ, ಸಂಕಷ್ಟವ್ರತ ಮತ್ತು ಹುಣ್ಣಿಮೆಯಂದು ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ. 
    ಈ ದೇವಸ್ಥಾನ ಇನ್ನಿಷ್ಟು ಅಭಿವೃದ್ಧಿ ಹೊಂದಲಿ, ನಾಡಿನ ಪ್ರಸಿದ್ದ ಪುಣ್ಯ ಕ್ಷೇತ್ರಗಳ ಸಾಲಿನಲ್ಲಿ ಒಂದಾಗಲಿ ಎಂಬುದು ಈ ದೇವಸ್ಥಾನ ಭಕ್ತರ ಆಶಯವಾಗಿದೆ. 
    ಮೂಲ ಸೌಕರ್ಯ ಹೆಚ್ಚಿನ ಗಮನ ನೀಡಲಿ: 
    ಈ ದೇವಸ್ಥಾನ ನಗರಸಭೆ ವಾರ್ಡ್ ನಂ.೨ರ ವ್ಯಾಪ್ತಿಯಲ್ಲಿ ಬರುತ್ತಿದ್ದು, ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಪ್ರಮುಖ ಬಿ.ಎಚ್ ರಸ್ತೆಗೆ ಸಮೀಪದಲ್ಲಿದೆ. ದೇವಸ್ಥಾನ ಸುತ್ತಮುತ್ತ ಜನವಸತಿಗಳಿದ್ದು, ಕಿರಿದಾದ ರಸ್ತೆಯಲ್ಲಿರುವ ಈ ದೇವಸ್ಥಾನಕ್ಕೆ ಹೆಚ್ಚಿನ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಆಡಳಿತ ಗಮನ ಹರಿಸಬೇಕಾಗಿದೆ. ವಾಹನಗಳ ನಿಲುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂಬುದು ಭಕ್ತರ ಬೇಡಿಕೆಯಾಗಿದೆ. 

No comments:

Post a Comment