ಭದ್ರಾವತಿ ನ್ಯೂಟೌನ್, ಉಂಬ್ಳೆಬೈಲ್ ರಸ್ತೆ, ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹೊಲಯ-ಮಾದಿಗರ ಸಮನ್ವಯ ಸಮಿತಿ ವತಿಯಿಂದ ೨೦೭ನೇ ವರ್ಷದ ಭೀಮಾ ಕೊರೆಗಾವ್ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ : ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್‌ರವರ ಬದುಕಿನಲ್ಲಿ ಮುಖ್ಯ ಪ್ರೇರಣೆ ನೀಡಿದ ಕೊರೆಗಾವ್ ಯುದ್ಧ ದೇಶದ ಇತಿಹಾಸದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದಿನ ಸಮಾಜಕ್ಕೂ ಈ ಯುದ್ಧ ಸ್ಪೂರ್ತಿದಾಯಕವಾಗಿದ್ದು, ನಾವೆಲ್ಲರೂ ಜಾಗೃತರಾಗಬೇಕಾಗಿದೆ ಎಂದು ದಲಿತ ಮುಖಂಡ ಚಿನ್ನಯ್ಯ ಹೇಳಿದರು.
ಅವರು ನಗರದ ನ್ಯೂಟೌನ್, ಉಂಬ್ಳೆಬೈಲ್ ರಸ್ತೆ, ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹೊಲಯ-ಮಾದಿಗರ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೦೭ನೇ ವರ್ಷದ ಭೀಮಾ ಕೊರೆಗಾವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದು ವಿಜಯ ಸಾಧಿಸಿದ ಮಹಾರ್ ಯೋಧರ ಶೌರ್ಯದ ದಿನವನ್ನು ನಾವೆಲ್ಲರೂ ನೆನಪು ಮಾಡಿಕೊಳ್ಳುವ ಜೊತೆಗೆ ಅಸ್ಪೃಶ್ಯತೆಯ ಅಂದಿನ ಸಮಾಜವನ್ನು ಯಾರಿಂದಲೂ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ಯುದ್ಧದ ಪ್ರೇರಣೆಯಿಂದ ಶೋಷಿತ ಸಮಾಜದ ಪರವಾಗಿ ಧ್ವನಿಯಾಗಿ ನಿಲ್ಲುವ ಮೂಲಕ ನಮ್ಮೆಲ್ಲರಿಗೂ ಬೆಳಕಾಗಿದ್ದು, ಇವರ ಆದರ್ಶತನ, ಚಿಂತನೆಗಳನ್ನು ಅಳವಡಿಸಿಕೊಂಡು ಮುನ್ನಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ದಲಿತ ಮುಖಂಡ, ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಮಾತನಾಡಿ, ಈ ಯುದ್ಧ ಭಾರತದ ಇತಿಹಾಸದ ಪುಟದಲ್ಲಿ ಎಂದಿಗೂ ಅಚ್ಚಳಿಯದೆ ಉಳಿಯಬೇಕಾಗಿತ್ತು. ದುರಂತವೆಂದರೆ ಆಗಿನ ಕಾಲದ ಬ್ರಾಹ್ಮಣಶಾಹಿ ವ್ಯವಸ್ಥೆ ಈ ಘನಘೋರ ಹೋರಾಟವನ್ನು ಇತಿಹಾಸದ ಪುಟದಲ್ಲಿ ದಾಖಲಿಸದೆ ದಲಿತರಿಗೆ ಮೋಸ ಮಾಡಿದೆ ಎಂದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಇಂಗ್ಲೆಂಡಿನಲ್ಲಿ ವ್ಯಾಸಾಂಗ ಮಾಡುವಾಗ ಆಂಗ್ಲ ಇತಿಹಾಸಕಾರರು ದಾಖಲಿಸಿದ ಮಾಹಿತಿಯನ್ನು ಆಧರಿಸಿ ಮಹಾರಾಷ್ಟ್ರದ ಭೀಮಾ ತೀರದ ಕೊರೆಗಾಮ್ ಸ್ಥಳದಲ್ಲಿ ಹುತಾತ್ಮ ಮಹರ್ ಸೈನಿಕರ ಸ್ಮರಣಾರ್ಥ ಬ್ರಿಟಿಷರು ನಿರ್ಮಿಸಿದ್ದ ಸ್ಮಾರಕವನ್ನು ಗುರುತಿಸಿ, ಇಡೀ ಜಗತ್ತಿಗೆ ಈ ಯುದ್ಧದ ಮಹತ್ವ ಸಾರಿದರು. ಹಾಗಾಗಿ ದಲಿತರು ಗುಲಾಮರಲ್ಲ, ಸ್ವಾಭಿಮಾನಿ ವೀರರು ಎಂಬ ಸತ್ಯವನ್ನು ನಾವು ಅರಿತುಕೊಳ್ಳಬೇಕಿದೆ ಎಂದರು.
ಹೊಲಯ-ಮಾದಿಗರ ಸಮನ್ವಯ ಸಮಿತಿ ಮುಖಂಡ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ನಗರಸಭೆ ಸದಸ್ಯ ಚನ್ನಪ್ಪ, ದಲಿತ ಮುಖಂಡರಾದ ಭಾನುಪ್ರಸಾದ್, ನಿತ್ಯಾನಂದ, ಧರ್ಮರಾಜ್, ಜಗದೀಶ್, ಕೃಷ್ಣ ಛಲವಾದಿ, ಪುಟ್ಟರಾಜ್, ಕುಬೇಂದ್ರಪ್ಪ, ಎಸ್ ಉಮಾ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹೇಶ್ ಛಲವಾದಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಲಿತ ಮುಖಂಡ ಸತ್ಯ ಭದ್ರಾವತಿ ಬುದ್ಧ ಪ್ರಾರ್ಥನೆ ನೆರವೇರಿಸಿದರು. ಇದಕ್ಕೂ ಮೊದಲು ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
No comments:
Post a Comment