Thursday, January 9, 2025

ಉಕ್ಕಿನ ನಗರದ ವಿವಿಧೆಡೆ ವೈಕುಂಠನಾಥನ ದರ್ಶನಕ್ಕೆ ಸಕಲ ಸಿದ್ದತೆ

ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಸ್ಥಾನ, ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆ ಹಾಗು ಮಿಲ್ಟ್ರಿಕ್ಯಾಂಪ್ ಶ್ರೀನಿವಾಸ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧೆಡೆ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಆಚರಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.
    ಬಹುತೇಕ ದೇವಸ್ಥಾನಗಳಲ್ಲಿ ಬೆಳಿಗ್ಗೆ ೪.೩೦ರಿಂದಲೇ ಶ್ರೀ ವೈಕುಂಠನಾಥನ ದರ್ಶನ ಆರಂಭಗೊಳ್ಳಲಿದ್ದು, ಪ್ರತಿ ವರ್ಷದಂತೆ ಈ ಬಾರಿ ಸಹ ಮುಜರಾಯಿ ಇಲಾಖೆಗೆ ಸೇರಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಪ್ರತಿ ವರ್ಷ ನಿರೀಕ್ಷೆಗೂ ಮೀರಿ ಭಕ್ತರು ಪಾಲ್ಗೊಳ್ಳುತ್ತಿದ್ದು, ಜ.೧೦ ಮತ್ತು ೧೧ ಎರಡು ದಿನಗಳ ಕಾಲ ಧಾರ್ಮಿಕ ಆಚರಣೆಗಳು ಜರುಗಲಿವೆ. 
    ಬೆಳಿಗ್ಗೆ ೪.೩೦ಕ್ಕೆ ಪ್ರಾಕಾರ ಉತ್ಸವ, ಪರಮಪದ ಮಹಾದ್ವಾರದ ಪೂಜೆ, ಶ್ರೀ ವೈಕುಂಠನಾಥನ ದರ್ಶನ ನಂತರ ಶ್ರೀ ಗೋದಾದೇವಿ ಅಮ್ಮನವರ ಉತ್ಸವದೊಂದಿಗೆ ನಗರದ ಎಲ್ಲಾ ಭಜನಾ ಮಂಡಳಿಯವರಿಂದ ನಗರ ಸಂಕೀರ್ತನೆ ಹಾಗು ಜ.೧೧ರಂದು ಬೆಳಿಗ್ಗೆ ೪.೩೦ಕ್ಕೆ ನಿತ್ಯಪೂಜೆ, ಮಹಾಮಂಗಳಾರತಿ, ಸಂಜೆ ೬ಕ್ಕೆ ಮುಕ್ಕೋಟಿ ದ್ವಾದಶಿ ಪ್ರಯುಕ್ತ ರಥಬೀದಿಯಲ್ಲಿ ಶ್ರೀ ಸ್ವಾಮಿಯವರ ಉತ್ಸವ ಶ್ರೀ ವೈಕುಂಠನಾಥನ ದರ್ಶನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ. 
ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ ೫ ಗಂಟೆಯಿಂದ ವೈಕುಂಠನಾಥ ದರ್ಶನ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 
    ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ತಾಲೂಕು ವೈಷ್ಣವ ಪರಿಷತ್ ವತಿಯಿಂದ ವೈಕುಂಠ ಏಕಾದಶಿ ಹಾಗು ಸಹಸ್ರ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೬ ಗಂಟೆಯಿಂದ ವೈಕುಂಠನಾಥ ದರ್ಶನ, ೧೦ ಗಂಟೆಯಿಂದ ಪಲ್ಲಕ್ಕಿ ಉತ್ಸವ ಮತ್ತು ಸಂಜೆ ೫.೩೦ಕ್ಕೆ ವೆಂಕಟೇಶ್ವರ ಸ್ವಾಮಿಯವರಿಗೆ  ದಾಸನ ಸೇವೆ ಹಾಗು ಸಂಜೆ ೬.೩೦ರಿಂದ ದೀಪೋತ್ಸವ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಶ್ರೀಕ್ಷೇತ್ರದ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠ ಕೋರಿದ್ದಾರೆ.
    ಬಿ.ಎಚ್ ರಸ್ತೆ, ಹುತ್ತಾಕಾಲೋನಿ, ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ವಿಜೃಂಭಣೆಯಿಂದ ವೈಕುಂಠ ಏಕಾದಶಿ ಆಚರಿಸಲಾಗುತ್ತಿದ್ದು, ಭಕ್ತರಿಗೆ ವೈಕುಂಠನಾಥನ ದರ್ಶನ ಪಡೆಯಲು ಸಕಲ ಸಿದ್ದತೆಗಳನ್ನು ದೇವಸ್ಥಾನ ಆಡಳಿತ ಮಂಡಳಿ ಕೈಗೊಂಡಿದೆ.

No comments:

Post a Comment