Thursday, January 9, 2025

ಜ.೧೬ರಿಂದ ೪೨ ದಿನ ಲ್ಲಿ ಸರ್.ಎಂ ವಿಶ್ವೇಶ್ವರಾಯ ಭದ್ರಾವತಿ ಉತ್ಸವ್-೨೦೨೫


ಭದ್ರಾವತಿ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ  ಸರ್.ಎಂ ವಿಶ್ವೇಶ್ವರಾಯ ಭದ್ರಾವತಿ ಉತ್ಸವ್-೨೦೨೫ ನಡೆಸುವ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು. 
    ಭದ್ರಾವತಿ: ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ವತಿಯಿಂದ ಈ ಬಾರಿ ನಗರದ ನ್ಯೂಟೌನ್ ವಿಐಎಸ್‌ಎಲ್ ಹಾಕಿ ಕ್ರೀಡಾಂಗಣದಲ್ಲಿ ಸರ್.ಎಂ ವಿಶ್ವೇಶ್ವರಾಯ ಭದ್ರಾವತಿ ಉತ್ಸವ್-೨೦೨೫ ಹಮ್ಮಿಕೊಳ್ಳಲಾಗಿದ್ದು, ಕಾರ್ಮಿಕರು, ಕುಟುಂಬ ವರ್ಗದವರು ಹಾಗು ಕ್ಷೇತ್ರದ ಜನತೆಗೆ ಸುಮಾರು ೪೨ ದಿನಗಳವರೆಗೆ ಹಬ್ಬದ ವಾತಾವರಣದಲ್ಲಿ ಕಾಲ ಕಳೆಯಲು ನೆರವಾಗುತ್ತಿದೆ. ಈ ಹಿನ್ನಲೆಯಲ್ಲಿ ಉತ್ಸವಕ್ಕೆ ಕಾರ್ಮಿಕ ಸಂಘದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ವಿಐಎಸ್‌ಎಲ್ ಕಾರ್ಖಾನೆ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ತಿಳಿಸಿದರು. 
    ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.೧೬ ರಿಂದ ಫೆಬ್ರವರಿ ೨೬ರವರೆಗೆ ಉತ್ಸವ ನಡೆಯಲಿದ್ದು, ಉತ್ಸವದ ಸಂಪೂರ್ಣ ಜವಾಬ್ದಾರಿ ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ತೆಗೆದುಕೊಂಡಿದೆ ಎಂದರು. 
    ಉತ್ಸವ ಕೇವಲ ವಸ್ತು ಪ್ರದರ್ಶನ ಹಾಗು ಮಕ್ಕಳ ಆಟಿಕೆಗಳಿಗೆ ಸೀಮಿತವಾಗದೆ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮನರಂಜನೆ ಹಾಗು ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೆ ಅಮ್ಯೂಸ್‌ಮೆಂಟ್ ಪಾರ್ಕ್ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಮನರಂಜನೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಾರ್ಮಿಕರು, ಕುಟುಂಬ ವರ್ಗದವರು ಹಾಗು ಕ್ಷೇತ್ರದ ಜನತೆಗೆ ಕೆಲ ಸಮಯ ನೆಮ್ಮದಿಯಿಂದ ಕಾಲ ಕಳೆಯಲು ಅವಕಾಶ ಲಭಿಸಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕ ಸಂಘ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದರು.
    ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಮಾತನಾಡಿ, ಪ್ರತಿ ವರ್ಷ ಕಾರ್ಖಾನೆ ವತಿಯಿಂದ ವಿಐಎಸ್‌ಎಲ್ ಉತ್ಸವ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಆಡಳಿತ ಮಂಡಳಿಗೆ ಉತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ.  ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ವತಿಯಿಂದ ನಡೆಸಲಾಗುತ್ತಿರುವ ಉತ್ಸವ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಐಎಸ್ ಎಲ್ ಉತ್ಸವದ ರೀತಿಯಲ್ಲಿಯೇ ಈ ಉತ್ಸವ ಸಹ ನಡೆಸುವ ಉದ್ದೇಶ ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ಹೊಂದಿದೆ ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಆರ್ ಕರ್ನಾಟಕ ಅಮ್ಯೂಸ್‌ಮೆಂಟ್ ಪಾರ್ಕ್ ಆಯೋಜಕ ಎಚ್. ಪ್ರದೀಪ್ ಕುಮಾರ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

No comments:

Post a Comment