Monday, March 3, 2025

ವಿಐಎಸ್‌ಎಲ್ ನಗರಾಡಳಿತ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ : ಸರ್ವೆ ನಡೆಸಿ, ಜಾಗದ ಬಗ್ಗೆ ಲಿಖಿತ ದಾಖಲೆ ನೀಡಿ

ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ 

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ, ಫಿಲ್ಟರ್ ಶೆಡ್, ಸರ್ವೆ ನಂ. ೭ರಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡದ ಜಾಗಕ್ಕೆ ವಿಐಎಸ್‌ಎಲ್ ನಗರಾಡಳಿತ ವತಿಯಿಂದ ಸರ್ವೆ ನಡೆಸಿ ಜಾಗದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸೋಮವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.  
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಜನ್ನಾಪುರ, ಫಿಲ್ಟರ್ ಶೆಡ್, ಸರ್ವೆ ನಂ. ೭ರಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಕಟ್ಟಡದ ಜಾಗಕ್ಕೆ ವಿಐಎಸ್‌ಎಲ್ ನಗರಾಡಳಿತ ವತಿಯಿಂದ ಸರ್ವೆ ನಡೆಸಿ ಜಾಗದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸೋಮವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.  
    ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ನಿವಾಸಿಗಳು ಫಿಲ್ಟರ್‌ಶೆಡ್‌ನಲ್ಲಿ ೩೦*೮೦ ಅಳತೆಯಲ್ಲಿ ಕಾನೂನು ಬಾಹಿರವಾಗಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗಿದ್ದು, ಈ ಜಾಗಕ್ಕೆ ಸಂಬಂಧಪಟ್ಟಂತೆ ಪಹಣಿಯಲ್ಲಿ ವಿಐಎಸ್‌ಎಲ್ ಮತ್ತು ಗೋಮಾಳ ಜಾಗ ಎಂದು ನಮೂದಾಗಿರುತ್ತದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ತಾಲೂಕು ಆಡಳಿತ ಮತ್ತು ವಿಐಎಸ್‌ಎಲ್ ನಗರಾಡಳಿತ ವತಿಯಿಂದ ಸ್ಥಳ ಪರಿಶೀಲಿಸಿ ಫೆ.೨೮ ರಂದು ಜಂಟಿ ಸರ್ವೆ ನಡೆಸುವ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿವಿಲ್ ಇಂಜಿನಿಯರ್ ನಂದನ್‌ರವರು ಕಟ್ಟಡ ನಿರ್ಮಾಣವಾಗಿರುವ ಜಾಗ ವಿಐಎಸ್‌ಎಲ್ ಸೇರಿದ್ದು ಎಂದು ಮೌಖಿಕವಾಗಿ ನಮಗೆ ತಿಳಿಸಿರುತ್ತಾರೆಂದು ಆರೋಪಿಸಿದರು. 
     ವಿಐಎಸ್‌ಎಲ್ ನಗರಾಡಾಳಿತ ಕಛೇರಿಯವರು ತಮ್ಮ ವ್ಯಾಪ್ತಿಗೊಳಪಡುವ ಜಾಗಗಳಲ್ಲಿ ವ್ಯಾಪಾರಿಗಳಿಗೆ, ಬಡ ನಾಗರಿಕರಿಗೆ ಸಣ್ಣಪುಟ್ಟ ವ್ಯಾಪಾರ ಮಾಡುವುದಕ್ಕೂ ಕೂಡ ಅವಕಾಶ ಮಾಡಿಕೊಡುವುದಿಲ್ಲ. ಆದರೆ ಇಷ್ಟು ದೊಡ್ಡ ಕಟ್ಟಡ ನಿರ್ಮಾಣ ಮಾಡಿ ಮುಗಿಯುವ ಹಂತಕ್ಕೆ ಬಂದರೂ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದನ್ನು ಗಮನಿಸಿದಾಗ ನಗರಾಡಳಿತ ಇಲಾಖೆ ಮತ್ತು ನಂದನ್‌ರವರು ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ಜೊತೆ ಶಾಮೀಲಾಗಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕಟ್ಟಡ ನಿರ್ಮಾಣವಾಗಿರುವ ಜಾಗದ ಸರ್ವೆ ನಡೆಸಿ ಜಾಗದ ಬಗ್ಗೆ ತಮ್ಮಲ್ಲಿರುವ ದಾಖಲೆಗಳ ಮಾಹಿತಿಯನ್ನು ಲಿಖಿತವಾಗಿ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. 
    ವಿಐಎಸ್‌ಎಲ್ ನಗರಾಡಳಿತಾಧಿಕಾರಿ ನವೀನ್ ರಾಹುಲ್‌ಗೆ ಫಿಲ್ಟರ್‌ಶೆಡ್ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಧರಣಿ ಸತ್ಯಾಗ್ರಹದಲ್ಲಿ ನಿವಾಸಿಗಳಾದ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ, ನಗರಸಭೆ ಸದಸ್ಯೆ ಕೆ.ಆರ್ ಸವಿತಾ, ಮುಖಂಡ ಉಮೇಶ್, ಇಂದ್ರಮ್ಮ, ದಿವ್ಯಶ್ರೀ, ಮುದ್ದಮ್ಮ, ಲಕ್ಷ್ಮಮ್ಮ, ಸಣ್ಣಕ್ಕ, ಅನುಸೂಯ, ಸಂಧ್ಯಾ, ಮುನಿಯಮ್ಮ, ಮಾಲಕ್ಕ, ಯೋಗೇಶ್, ಗೋಪಾಲರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment