ಭದ್ರಾವತಿಯಲ್ಲಿ ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ನಗರದ ರಂಗಪ್ಪ ವೃತ್ತದಲ್ಲಿ ಡಿ.ಕೆ ಶಿವಕುಮಾರ್‌ರವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ: ಕಾಂಗ್ರೆಸ್ ಸರ್ಕಾರ ಮುಸ್ಲಿಂ ಧರ್ಮದವರಿಗೆ ಶೇ.೪ರಷ್ಟು ಮೀಸಲಾತಿ ನೀಡಿದ್ದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಹೇಳಿರುವ ಹಾಗೆ ಸಂವಿಧಾನ ಬದಲಾಯಿಸುವ ಅವಶ್ಯಕತೆ ಬಂದರೆ ಸಂವಿಧಾನವನ್ನೂ ಸಹ ಬದಲಾಯಿಸುತ್ತೇವೆ. ಕಾಂಗ್ರೆಸ್ ಸರ್ಕಾರವೇ ಸಂವಿಧಾನ ಜಾರಿಗೆ ತಂದದ್ದು ಎಂಬ ಹೇಳಿಕೆ ಮೂಲಕ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಹಿಂದುಗಳಿಗೆ ಹಾಗು ದಲಿತರಿಗೆ ಅವಮಾನಿಸಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಆರೋಪಿಸಿದರು.
ಬಿಜೆಪಿ ಮಂಡಲ ವತಿಯಿಂದ ಮಂಗಳವಾರ ನಗರದ ರಂಗಪ್ಪ ವೃತ್ತದಲ್ಲಿ ಡಿ.ಕೆ ಶಿವಕುಮಾರ್‌ರವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಂ ಧರ್ಮದವರಿಗೆ ಪಾಕಿಸ್ತಾನ ಬಿಟ್ಟುಕೊಡುವ ಜೊತೆಗೆ ಅವರಿಗಾಗಿ ದೇಶದಲ್ಲಿ ವಿಶೇಷ ಸ್ಥಾನಮಾನ ಸಹ ನೀಡಲಾಗಿದೆ. ಆದರೂ ಸಹ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಎಲ್ಲಾ ವಿಷಯದಲ್ಲೂ ತಾರತಮ್ಯ ಮಾಡುವ ಮೂಲಕ ಹಿಂದುಗಳನ್ನು ದಮನ ಮಾಡುವ ಪ್ರಜಾಪ್ರಭುತ್ವ ವಿರೋಧಿ ನಿಲುವು, ಧೋರಣೆ ಅನುಸರಿಸಲಾಗುತ್ತಿದೆ. ಸಂವಿಧಾನ ದೇಶದ ರಕ್ಷಣೆಗಾಗಿ ಇದ್ದು, ಆದರೆ ಅದನ್ನು ಆಟಿಕೆಯಂತೆ ವೋಟ್ ಬ್ಯಾಂಕ್‌ಗಾಗಿ ಮುಸ್ಲಿಂ ಧರ್ಮದವರ ಓಲೈಕೆಗಾಗಿ ಪ್ರತಿ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ವಿರೋಧಿ ನೀತಿ ತಾಳುತ್ತಿರುವ ಡಿ.ಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಹುಲ್‌ಗಾಂಧಿ ಅವರಿಗೆ ಸಂವಿಧಾನದ ಮೇಲೆ ಸ್ವಲ್ಪವಾದರೂ ಗೌರವವಿದ್ದಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ತಕ್ಷಣ ಪಕ್ಷದಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿದರು.
ಪ್ರ ತಿಭಟನೆಯಲ್ಲಿ ಡಿ.ಕೆ ಶಿವಕುಮಾರ್ ಅವರ ಭಾವಚಿತ್ರ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಪಕ್ಷದ ಯುವ ಮುಖಂಡ ಮಂಗೋಟೆ ರುದ್ರೇಶ್, ಜಿಲ್ಲಾ ಉಪಾಧ್ಯಕ್ಷ ಜಿ. ಆನಂದ್ ಕುಮಾರ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಮೊಸರಳ್ಳಿ ಅಣ್ಣಪ್ಪ, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ಹನುಮಂತ ನಾಯ್ಕ, ಸರಸ್ವತಿ, ಧನುಷ್ ಬೋಸ್ಲೆ, ರಾಜಶೇಖರ್ ಉಪ್ಪಾರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಸತೀಶ್, ರಘುರಾವ್, ನಿರಂಜನ್ ಗೌಡ, ಪ್ರಸನ್ನಕುಮಾರ್, ಜಿ.ವಿ ಕುಮಾರ್, ಶಿವಮೂರ್ತಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಲೋಚನ ಪ್ರಕಾಶ್,ನಂಜಪ್ಪ, ಆಟೋ ಮೂರ್ತಿ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
No comments:
Post a Comment