ಬುಧವಾರ, ಏಪ್ರಿಲ್ 9, 2025

ರಾಜ್ಯಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿಗೆ ಭಾಜನರಾದ ಎಂ.ಆರ್ ರೇವಣಪ್ಪ

ಎಂ.ಆರ್ ರೇವಣಪ್ಪ 
    ಭದ್ರಾವತಿ: ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪರವರು ರಾಜ್ಯಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.  
ರೇವಣಪ್ಪರವರು ಸಾಹತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಬೆಂಗಳೂರು ಕೊಡಿಗೆಹಳ್ಳಿಯ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಕರ್ನಾಟಕ ವತಿಯಿಂದ  ಪ್ರಶಸ್ತಿ ನೀಡಲಾಗುತ್ತಿದೆ. 
    ರೇವಣಪ್ಪರವರು ಉತ್ತಮ ಶಿಕ್ಷಕರಾಗಿದ್ದು, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಶಿಕ್ಷಕ ವೃತ್ತಿ ಜೊತೆಗೆ ಕಳೆದ ಸುಮಾರು ೩೦ ವರ್ಷಗಳಿಂದ ಜಾನಪದ, ನಾಟಕ ಸೇರಿದಂತೆ ಹಲವು ಕಲೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಗ್ಯಾಬಾಳ್ಯ, ರಾಜಾವಿಕ್ರಮ, ಸತ್ಯಹರಿಶ್ಚಂದ್ರ ಸೇರಿದಂತೆ ಸುಮಾರು ೩೦ ರಿಂದ ೪೦ ಪೌರಾಣಿಕ ಹಾಗು ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶನಗೊಳಿಸಿದ್ದಾರೆ. ಅಲ್ಲದೆ ಕರ್ನಾಟಕ ನಾಟ್ಯ ವೈಭವ ಮಂಡಳಿಯ ಹಲವು ನಾಟಕದಲ್ಲಿ ಅಭಿನಯಿಸಿದ್ದಾರೆ. 
    ರೇವಣಪ್ಪರವರು ಡೊಳ್ಳು ಕುಣಿತ, ಕೋಲಾಟ, ಸುಗ್ಗಿ ಕುಣಿತ ಕಲಾವಿದರೂ ಸಹ ಆಗಿದ್ದು, ರಾಜ್ಯ ಹಾಗು ರಾಷ್ಟ್ರಮಟ್ಟದ ಪ್ರದರ್ಶನಗಳಲ್ಲಿ ಭಾಗವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಕಲೆಗಳನ್ನು ತಿಳಿಸಿಕೊಡುವ ಕಾರ್ಯದಲ್ಲೂ ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಕಾರಾಗೃಹದಲ್ಲೂ ಶಿಬಿರಗಳನ್ನು ಆಯೋಜಿಸಿ ಕೈದಿಗಳಿಗೂ ತಮ್ಮ ಕಲೆಗಳನ್ನು ಕಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 
    ರೇವಣಪ್ಪರವರು ಏ.೧೦ರಂದು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯಲಿರುವ `ಕರ್ನಾಟಕ ಸಾಂಸ್ಕೃತಿಕ ವೈಭವ-೨೦೨೫' ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ