Friday, May 9, 2025

ಕಾರ್ಮಿಕರು ಸೌಲಭ್ಯಗಳನ್ನು ಪಡೆದುಕೊಳ್ಳಲು ಕಾನೂನುಗಳು ಸಹಕಾರಿ : ಎಂ. ಶಿವಕುಮಾರ್

ಭದ್ರಾವತಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಮಾಚೇನಹಳ್ಳಿ, ಶಾಂತಲಾ ಸ್ಪೆರೋ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಕಾರ್ಯಾಗಾರ ನ್ಯಾಯವಾದಿ ಎಂ. ಶಿವಕುಮಾರ್, ಕಾರ್ಮಿಕ ನಿರೀಕ್ಷಕ ರಕ್ಷಿತ್, ವ್ಯವಸ್ಥಾಪಕ ನಿರ್ದೇಶಕ ಡಿ.ಬಿ ಅಶೋಕ್, ನಂಜುಂಡೇಶ್ವರ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಕಾರ್ಮಿಕರು ನ್ಯಾಯಯುತವಾದ ಸೌಲಭ್ಯಗಳು ಪಡೆದುಕೊಳ್ಳುವಲ್ಲಿ ಕಾನೂನುಗಳು ಹೆಚ್ಚಿನ ಸಹಕಾರಿಯಾಗಿವೆ. ಈ ಹಿನ್ನಲೆಯಲ್ಲಿ ಕಾನೂನಿನ ಬಗ್ಗೆ ಅರಿವು ಹೊಂದಬೇಕೆಂದು ನ್ಯಾಯವಾದಿ ಎಂ. ಶಿವಕುಮಾರ್ ಹೇಳಿದರು. 
    ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಮಾಚೇನಹಳ್ಳಿ, ಶಾಂತಲಾ ಸ್ಪೆರೋ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಾರ್ಮಿಕ ಅಧಿನಿಯಮ ಹಾಗೂ ಕಾರ್ಮಿಕರ ಹಕ್ಕುಗಳ ಬಗ್ಗೆ  ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಉಪನ್ಯಾಸ ನೀಡಿದರು. 
    ಕಾರ್ಮಿಕರು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಶ್ರಮ ಶ್ಲಾಘನೀಯವಾಗಿದ್ದು, ಕಾರ್ಮಿಕರಿಗೆ ನ್ಯಾಯಯುತವಾಗಿ ಲಭಿಸಬೇಕಾಗಿರುವ ವೈದ್ಯಕೀಯ ಹಾಗೂ ವಿಮಾ  ಸೌಕರ್ಯಗಳು ಸುಲಭವಾಗಿ ಸಿಗುತ್ತಿಲ್ಲ. ಕಾರ್ಮಿಕ ಸಂಘಗಳ ಮೂಲಕ ಸಂಘಟಿತ ಹೋರಾಟ ನಡೆಸಿ ಅಥವಾ ಕಾನೂನು ಹೋರಾಟದ ಮೂಲಕ ಪಡೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಕಾರ್ಮಿಕರು ಕಾನೂನಿನ ಅರಿವನ್ನು ಪಡೆದು ಹೆಚ್ಚಿನ ಪರಿಹಾರ ಪಡೆದುಕೊಳ್ಳಬಹುದು ಎಂದರು. 
    ಕಾರ್ಮಿಕರ ಶ್ರಮ ಬಂಡವಾಳಕ್ಕಿಂತ ದೊಡ್ಡದು. ಅವರ ಶ್ರಮ ಮತ್ತು ಕೌಶಲ್ಯ ಬಂಡವಾಳ ಶಾಹಿಗಳು ಗುರುತಿಸಬೇಕು. ಅವರಿಗೆ ಮೂಲಭೂತ ಸೌಕರ್ಯಗಳು, ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದರು. 
    ಕಾರ್ಮಿಕ ನಿರೀಕ್ಷಕ  ರಕ್ಷಿತ್, ಶಾಂತಲಾ ಸ್ಪೆರೋ ಕ್ಯಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಬಿ ಅಶೋಕ್ ಹಾಗೂ ನಂಜುಂಡೇಶ್ವರ, ಹಿರಿಯ ನ್ಯಾಯವಾದಿಗಳಾದ ರಮೇಶ್‌ಸಿಂಗ್ ಮತ್ತು ವಿಶ್ವನಾಥ್ ಹಾಗು ಕಾನೂನು ಸೇವಾ ಸಮಿತಿ ಸಂಯೋಜಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

No comments:

Post a Comment