Thursday, June 5, 2025

ಜನೌಷಧ ಕೇಂದ್ರದಲ್ಲಿ ಎಲ್ಲಾ ಔಷಧಗಳು ಲಭಿಸಲಿ : ಬಡ ವರ್ಗದವರ ಹಿತ ಕಾಪಾಡಿ

ಬಿಜೆಪಿ ಯುವ ಮೋರ್ಚಾ ಆಸ್ಪತ್ರೆ ಮುಂಭಾಗ ಪ್ರತಿಭಟಿಸಿ ಆಗ್ರಹ

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರದಲ್ಲಿ ಎಲ್ಲಾ ಔಷಧಗಳು ಲಭ್ಯವಿರುವಂತೆ ಹಾಗು ಆಸ್ಪತ್ರೆಯಲ್ಲಿ ಎಲ್ಲಾ ಔಷಧಗಳು ಉಚಿತವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪಕ್ಷದ ತಾಲೂಕಿನ ಭದ್ರಾವತಿ ಹಾಗು ಹೊಳೆಹೊನ್ನೂರು ಮಂಡಲಗಳ ಯುವ ಮೋರ್ಚಾ ವತಿಯಿಂದ ಗುರುವಾರ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಆಗ್ರಹಿಸಲಾಯಿತು. 
    ಭದ್ರಾವತಿ: ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರದಲ್ಲಿ ಎಲ್ಲಾ ಔಷಧಗಳು ಲಭ್ಯವಿರುವಂತೆ ಹಾಗು ಆಸ್ಪತ್ರೆಯಲ್ಲಿ ಎಲ್ಲಾ ಔಷಧಗಳು ಉಚಿತವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪಕ್ಷದ ತಾಲೂಕಿನ ಭದ್ರಾವತಿ ಹಾಗು ಹೊಳೆಹೊನ್ನೂರು ಮಂಡಲಗಳ ಯುವ ಮೋರ್ಚಾ ವತಿಯಿಂದ ಗುರುವಾರ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿ ಆಗ್ರಹಿಸಲಾಯಿತು. 
    ಬಡ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ತೆರೆದಿದ್ದು, ಬಡವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅವರು ಪ್ರತಿನಿತ್ಯ ಔಷಧಿಗಾಗಿ ವೆಚ್ಚ ಮಾಡುವ ವೆಚ್ಚವನ್ನು ಸರಿಸುಮಾರು ಶೇ. ೭೦೦ ರಿಂದ ೮೦೦ರಷ್ಟು ಕಡಿಮೆ ಮಾಡುವ ಮೂಲಕ ಅವರನ್ನು ಆರ್ಥಿಕ ಸಂಕಷ್ಟದಿಂದ ಹೊರತರಬಹುದಾಗಿದೆ. ಈ ಯೋಜನೆ ಬಡವರಿಗೆ ವರದಾನವಾಗಿದ್ದು, ಮಾನವೀಯತೆಯ ಯೋಜನೆಯಾಗಿದೆ. ಆದರೆ ರಾಜ್ಯ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಲಾಯಿತು. 
    ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯರು ಬರೆದುಕೊಡುವ ಔಷಧಗಳು ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಲಭ್ಯವಿರುವುದಿಲ್ಲ. ಇದರಿಂದ ಹೊರಗೆ ಖಾಸಗಿ ಔಷಧ ಕೇಂದ್ರಗಳಲ್ಲಿ ಹೆಚ್ಚಿನ ಹಣ ನೀಡಿ ಬಡವರು ಔಷಧ ಖರೀದಿಸುವಂತಾಗಿದೆ. ಇದನ್ನು ತಪ್ಪಿಸಲು ತಕ್ಷಣ ಎಲ್ಲಾ ಔಷಧಗಳು ಜನೌಷಧ ಕೇಂದ್ರದಲ್ಲಿ ಲಭ್ಯವಿರುವಂತೆ ಹಾಗು ಆಸ್ಪತ್ತೆಯಲ್ಲಿ ಎಲ್ಲಾ ಔಷಧಗಳು ಉಚಿತವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. 
    ಒಂದು ವೇಳೆ ಕ್ರಮ ಕೈಗೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳ ಡಾ. ಶಂಕರಪ್ಪ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಸಲಾಯಿತು. 
    ಪಕ್ಷದ ಮಂಡಲ ಅಧ್ಯಕ್ಷರುಗಳಾದ ಜಿ. ಧರ್ಮಪ್ರಸಾದ್, ಕೆ.ಎಚ್ ತೀರ್ಥಯ್ಯ ಮತ್ತು ಮಲ್ಲೇಶಪ್ಪರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಗೌಂಡರ್, ಕಾರ್ಯದರ್ಶಿ ಭರತ್, ಉಪಾಧ್ಯಕ್ಷ ಸುನಿಲ್, ಹೊಳೆಹೊನ್ನೂರು ಮಂಡಲ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಕುಮಾರ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ಮೊಸಹಳ್ಳಿ ಅಣ್ಣಪ್ಪ, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ರಾಜಶೇಖರ್ ಉಪ್ಪಾರ್, ಸರಸ್ವತಿ, ಪ್ರಮುಖರಾದ ಎಂ.ಎಸ್ ಸುರೇಶಪ್ಪ, ಎಸ್.ಪಿ ಸಿದ್ದಪ್ಪ, ಅನ್ನಪೂರ್ಣ, ಉಮಾವತಿ ಸೇರಿದಂತೆ ಯುವ ಮೋರ್ಚಾ ಕಾರ್ಯಕರ್ತರು, ಇನ್ನಿತರರು ಪಾಲ್ಗೊಂಡಿದ್ದರು. 

No comments:

Post a Comment