ಭಾನುವಾರ, ಜುಲೈ 20, 2025

ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಎಚ್.ಎಸ್.ವಿ ಕೊಡುಗೆ ಅನನ್ಯ : ಡಿ.ಮಂಜುನಾಥ್



ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಡಾ. ಎಚ್.ಎಸ್ ವೆಂಕಟೇಶ್‌ಮೂರ್ತಿರವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ "ಭಾವ ಗೀತೆಗಳ ಗೀತ ಗಾಯನ" ಕಾರ್ಯಕ್ರಮ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸಿದರು. 
    ಭದ್ರಾವತಿ: ಹಿರಿಯ ಸಾಹಿತಿ, ಲೇಖಕ, ಕಾದಂಬರಿಗಾರ ದಿವಂಗತ ಡಾ. ಎಚ್.ಎಸ್ ವೆಂಕಟೇಶ್‌ಮೂರ್ತಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದ್ದು, ಕನ್ನಡ ಆಸ್ಮಿತೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಒಬ್ಬ ಧೀಮಂತ ವ್ಯಕ್ತಿ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಬಣ್ಣಿಸಿದರು. 
    ಅವರು ಹಳೇನಗರದ ಶ್ರೀ ವೀರಭದ್ರೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಡಾ. ಎಚ್.ಎಸ್ ವೆಂಕಟೇಶ್‌ಮೂರ್ತಿರವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ "ಭಾವ ಗೀತೆಗಳ ಗೀತ ಗಾಯನ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಕನ್ನಡ ಕೆಲಸ ಮಾಡಲು ಪ್ರೇರೇಪಿಸಿದ, ಆತ್ಮೀಯರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ವ್ಯಕ್ತಿ ಎಂಬುದು ವಿಶೇಷ. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿನ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಛಾಪು ಮೂಡಿಸಿ ಜಾತೀಯತೆ ಶೋಷಣೆಯ ವಿರುದ್ದ ಹೋರಾಟ ಮಾಡಿದ್ದ ಕವಿ ಎಂದರು.
    ನಾವೆಲ್ಲಾ ಭಾರತೀಯರು ಎಂದು ಹೇಳುವ ಸಮಯದಲ್ಲಿ ಜಾತಿ, ಮತ, ಭಾಷೆ, ಮೇಲು, ಕೀಳು, ಸ್ಪೃಶ್ಯ, ಆಸ್ಪೃಶ್ಯ, ಅಸೂಯೆ, ಈರ್ಷೆಗಳನ್ನು ಹೊಂದಿರುವ ಆಶಾಂತಿಯ ವಾತಾವರಣದಲ್ಲಿ ಜೀವಸುತ್ತಿದ್ದೇವೆ. ಇಂತಹ ಸಂದರ್ಭಧಲ್ಲಿ ಸರ್ವಜನಾಂಗದ ಶಾಂತಿಯ ತೋಟ ಹೇಗೆ ನಿರ್ಮಾಣ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. 
    ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಬೇಕು. ಆ ಮೂಲಕ ಕನ್ನಡ ಭಾಷೆಯ ಬೆಳವಣಿಗೆಯ ಆಸಕ್ತಿ ಮೂಡುವಂತಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕನ್ನಡ ಭಾಷೆಯ ಕಮ್ಮಟಗಳನ್ನು, ಕಾರ್ಯಗಾರವನ್ನು ಹಮ್ಮಿಕೊಳ್ಳುವ ಯೋಜನೆ ಇದೆ. ಆ ಮೂಲಕ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ವಾತಾವರಣವನ್ನು ನಿರ್ಮಾಣ ಮಾಡಲಾಗುವುದು. ಇಂದಿನ ಯುವ ಜನಾಂಗ ಸಂವಿಧಾನ, ಅಂಬೇಡ್ಕರ್, ಸ್ವಾತಂತ್ರ್ಯ ಚಳುವಳಿಗಳ ಮಹತ್ವವನ್ನು ಅರಿಯಲಿ ಎಂಬ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ರಸ ಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಾಗೃತಿಯನ್ನು ಉಂಟು ಮಾಡಬೇಕು ಎಂದು ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅದರ ವಿರುದ್ದ ಕಾರ್ಯಕ್ರಮ ನಡೆಯದಂತೆ ಸರ್ಕಾರ ಆದೇಶವನ್ನು ಹೊರಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಈ ರೀತಿ ಆದೇಶವನ್ನು ಹೊರಡಿಸಲು ಯಾವ ಅಧಿಕಾರಿ ಕಾರಣ ಎಂಬುದು ಬಹಿರಂಗ ಆಗಬೇಕು. ಈ ಸಂಬಂಧ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.
    ಪರಿಷತ್ ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಜನ್ನಾಪುರ ಸಂಗೀತ ಶಿಕ್ಷಕಿ ಗಾಯಿತ್ರಿ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ನಿವೃತ್ತ ಪ್ರಾಂಶುಪಾಲ ಡಾ. ಕೆ. ನಿತ್ಯಾನಂದ ಉಪನ್ಯಾಸ ನೀಡಿದರು. ಸುಮತಿ ಕಾರಂತ್, ಕಮಲಾ ಕುಮಾರಿ, ಆರ್.ಜಿ ಭಾರ್ಗವಿ, ಎನ್.ಎಂ ಸುನಂದ, ಎಚ್.ಸಿ ಸುನಂದ, ನಗರಸಭಾ ಸದಸ್ಯೆ ಅನುಪಮ ಚನ್ನೇಶ್, ವಾಣಿಶ್ರೀ ನಾಗರಾಜ್, ಶ್ಯಾಮಲ, ಸುಚಿತ್ರ, ದಿವಾಕರ್, ಡಿ.ಆರ್.ಹರೀಶ್ ಮತ್ತು ರುದ್ರೇಶ್ ಗಾಯನ ಪ್ರಸ್ತುತ ಪಡಿಸಿದರು.
    ಸುಮತಿ ತಂಡದವರು ನಾಡ ಗೀತೆ ಹಾಡಿದರು. ಕಮಲಾಕರ್ ಸ್ವಾಗತಿಸಿ, ಬಿ.ಎಲ್ ಮೋಹನ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನ್ಯಾಯವಾದಿ ಬಿ.ಎಚ್ ಪ್ರಶಾಂತ್ ವಂದಿಸಿ,ನಾಗೋಜಿರಾವ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ